ಬೆಂಗಳೂರು: ಬೆಲೆ ಏರಿಕೆಯ ಬಿಸಿ ನಡುವೆಯೂ ರಾಜ್ಯದ ಜನರಿಗೆ ಸರ್ಕಾರ ವಿದ್ಯುತ್ ಶಾಕ್ ನೀಡಿದೆ. ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿದೆ. ಏಪ್ರಿಲ್ 1 ರಿಂದಲೇ ಈ ಪರಿಷ್ಕೃತ ವಿದ್ಯುತ್ ದರ ಜಾರಿಯಾಗಿದೆ ಎಂದು ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ. ಬೆಸ್ಕಾಂ, ಹೆಸ್ಕಾಂ, ಜೆಸ್ಕಾಂ, ಮೆಸ್ಕಾಂ ಎಲ್ಲಾ ನಿಗಮಗಳಲ್ಲೂ ಸರಾಸರಿ 35 ಪೈಸೆ ಹೆಚ್ಚಳ ಮಾಡಲಾಗಿದೆ ಎಂದರು.
ಕೇವಲ ವಿದ್ಯುತ್ ದರ ಏರಿಕೆ ಮಾತ್ರವಲ್ಲ, ವಿದ್ಯುತ್ ನಿಗದಿತ ಶುಲ್ಕವನ್ನೂ ಹೆಚ್ಚಿಸಿದ್ದಾರೆ. ಫಿಕ್ಸೆಡ್ ದರವನ್ನು 10 ರಿಂದ 30 ರೂಪಾಯಿಯಷ್ಟು ಏರಿಕೆ ಮಾಡಲಾಗಿದೆ ಎಂದು ಸೋಮವಾರ ವಸಂತನಗರದ ಅಯೋಗದ ಕೇಂದ್ರ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದರು. ಪ್ರತಿ ಯೂನಿಟ್‌ಗೆ ಕನಿಷ್ಠ 5 ಪೈಸೆಗಳಷ್ಟು ಇಂಧನ ಶುಲ್ಕಗಳ ಹಾಗೂ ಪ್ರತಿ ಹೆಚ್.ಪಿ/ಕಿ.ವಾ/ಕೆ.ವಿ.ಎ.ಗೆ 10 ರಿಂದ 30 ರವರೆಗೆ ನಿಗದಿತ ಶುಲ್ಕಗಳ ಹೆಚ್ಚಳವನ್ನು ಅನುಮೋದಿಸಲಾಗಿದೆ. ಇದರೊಂದಿಗೆ ಪ್ರತಿ ಯೂನಿಟ್ ದರ ಸರಾಸರಿ ದರ 35 ಪೈಸೆಯಷ್ಟಾಗಿರುತ್ತದೆ (ಶೇ.4.33 ಹೆಚ್ಚಳ) ಎಂದು ಮಾಹಿತಿ ನೀಡಿದರು.
1.85ರೂ. ಹೆಚ್ಚಳಕ್ಕೆ ಎಸ್ಕಾಂಗಳಿಂದ ಪ್ರಸ್ತಾವನೆ: ಕಳೆದ ಬಾರಿ 1 ರೂಪಾಯಿ 39 ಪೈಸೆ ಹೆಚ್ಚಳಕ್ಕೆ ಪ್ರಸ್ತಾಪ ಇಡಲಾಗಿತ್ತು. ಈ ಬಾರಿ ಎಲ್ಲ ಎಸ್ಕಾಂಗಳೂ ಸರಾಸರಿ 1.85ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಆದಾಯ ಕೊರತೆ 2159.48 ಕೋಟಿ ರೂ: 2022-23ನೇ ಆರ್ಥಿಕ ವರ್ಷದಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ 2159.48 ಕೋಟಿ ರೂ.ಗಳನ್ನು ಮರು ಪಡೆಯಲು ದರ ಹೆಚ್ಚಳ ಅನಿವಾರ್ಯವಾಗಿದೆ. ಈ ಮೊತ್ತವು ಆರ್ಥಿಕ ವರ್ಷ 2020-21ರ ಕೊರತೆಯ ಮೊತ್ತ ರೂ. 1700.49 ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಮಂತ್ರಿ ಜನಧನ್ ಲೂಟ್ ಯೋಜನೆ.. ಇಂಧನ ದರ ಏರಿಕೆ ವಿರುದ್ಧ ರಾಹುಲ್ ಗಾಂಧಿ ಕಿಡಿ..ಕಿಡಿ
ಕಂದಾಯ ಕೊರತೆಯ ಅನುಮೋದನೆ: ವಿದ್ಯುತ್ ಸರಬರಾಜು ಕಂಪನಿಗಳ ಪ್ರಸ್ತಾವನೆಗಳನ್ನು ಪರಿಗಣಿಸಿ ಆಯೋಗವು ಆರ್ಥಿಕ ವರ್ಷ 2023ಕ್ಕೆ ವಿದ್ಯುತ್ ಸರಬರಾಜು ಕಂಪನಿಗಳ 2159.00 ಕೋಟಿ ರೂಪಾಯಿಗಳ ಕಂದಾಯ ಕೊರತೆಯನ್ನು ಅನುಮೋದಿಸಿದೆ ಎಂದರು.
ಜನರಿಗೆ ಶಾಕ್ ಕೊಟ್ಟ ಆಯೋಗ: ಈಗಾಗಲೇ ರಾಜ್ಯದ ಜನರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಈ ನಡುವೆ ವಿದ್ಯುತ್ ದರ ಕೂಡ ಏರಿಕೆ ಮಾಡುವ ಮೂಲಕ ಸಾಮಾನ್ಯ ಜನತೆಗೆ ಶಾಕ್ ಮೇಲೆ ಶಾಕ್ ನೀಡಲಾಗಿದೆ.
- ಯಾವ ಯಾವ ವರ್ಷದಲ್ಲಿ ಎಷ್ಟು ಹೆಚ್ಚಳ?
- 2009 ರಲ್ಲಿ ಪ್ರತಿ ಯೂನಿಟ್‌ಗೆ 34 ಪೈಸೆ ಹೆಚ್ಚಳ
- 2010 ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಏರಿಕೆ
- 2011 ರಲ್ಲಿ ಪ್ರತಿ ಯೂನಿಟ್‌ಗೆ 28 ಪೈಸೆ
- 2012 ರಲ್ಲಿ ಪ್ರತಿ ಯೂನಿಟ್‌ಗೆ 13 ಪೈಸೆ
- 2013 ರಲ್ಲಿ ಪ್ರತಿ ಯೂನಿಟ್‌ಗೆ 13 ಪೈಸೆ
- 2017 ರಲ್ಲಿ ಪ್ರತಿ ಯೂನಿಟ್‌ಗೆ 48 ಪೈಸೆ
- 2019 ರಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ
- 2020 ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಆದೇಶಿಸಿತ್ತು.