ಬೆಂಗಳೂರು: ಸಚಿವ ಸುಧಾಕರ್ ಒತ್ತಡಕ್ಕೆ ಕಡೆಗೂ ಮಣಿದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಖಾತೆಯನ್ನು ಮರಳಿ ಸುಧಾಕರ್ ಗೆ ನೀಡಿದ್ದು, ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಖಾತೆಯನ್ನೂ ಬದಲಿಸಿ ಅಧಿಕೃತ ಆದೇಶ ಪಟ್ಟಿ ಪ್ರಕಟಿಸಿದ್ದಾರೆ.
ಮಾಧುಸ್ವಾಮಿ ಬಳಿ ಇರುವ ವೈದ್ಯಕೀಯ ಶಿಕ್ಷಣ ಖಾತೆಯನ್ನು ಸುಧಾಕರ್ ಗೆ ನೀಡಲಾಗಿದೆ. ಸುಧಾಕರ್ಗೆ ಆರೋಗ್ಯ ಖಾತೆ ಜೊತೆಗೆ ವೈದ್ಯಕೀಯ ಶಿಕ್ಷಣ ಖಾತೆಯೂ ಸಿಕ್ಕಿದೆ. ಆನಂದ್ ಸಿಂಗ್ ಬಳಿ ಇದ್ದ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ಜೆ.ಸಿ. ಮಾಧುಸ್ವಾಮಿಗೆ ಹಂಚಿಕೆ ಮಾಡಿದ್ದು, ಆನಂದ್ ಸಿಂಗ್ಗೆ ಹಜ್ ಮತ್ತು ವಕ್ಫ್ ಇಲಾಖೆ ಮತ್ತು ಸಿಎಂ ಬಳಿ ಇದ್ದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಖಾತೆಯನ್ನೂ ನೀಡಲಾಗಿದೆ.
ಕಳೆದ ರಾತ್ರಿ ಸಚಿವರ ಖಾತೆ ಮರು ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದು, ಇದೀಗ ರಾಜ್ಯಪಾಲರು ಖಾತೆಗಳ ಮರು ಹಂಚಿಕೆ ಪಟ್ಟಿಗೆ ಅಂಕಿತ ಹಾಕಿದ್ದಾರೆ.