ಬೆಂಗಳೂರು: ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ನೂತನ ಕಟ್ಟಡದಲ್ಲಿ ವಿಶೇಷ ಪೂಜೆ, ಹೋಮ-ಹವನ ಕಾರ್ಯಕ್ರಮ ಇಂದು ಬೆಳಗ್ಗೆ ನೆರವೇರಿತು. ಬೆಳಗ್ಗೆ 7 ಗಂಟೆಗೆ ಆರಂಭವಾದ ಪೂಜಾ ವಿಧಿ ವಿಧಾನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಭಾಗಿಯಾಗಿದ್ದರು.
ಕಳೆದ ಕೆಲ ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಕಟ್ಟಡ ನಿರ್ಮಾಣ ಕಾರ್ಯ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಪೂರ್ಣಗೊಳ್ಳಲಿ ಹಾಗೂ ಅಧ್ಯಕ್ಷರ ಪದಗ್ರಹಣ ಸಮಾರಂಭ ನಿರ್ವಿಘ್ನವಾಗಿ ನೆರವೇರಲಿ ಎಂಬ ಕಾರಣಕ್ಕೆ ಈ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಓದಿ:ಪ್ರತಿಜ್ಞಾ ವಿಧಿ ಕಾರ್ಯಕ್ರಮ; ಪೂರ್ವಭಾವಿ ಸಿದ್ಧತೆ ಪರಿಶೀಲಿಸಿದ ಡಿಕೆಶಿ
ಕಟ್ಟಡ ನಿರ್ಮಾಣ ಕಾರ್ಯ ಪರಮೇಶ್ವರ್ ಕಾಲಾವಧಿಯಲ್ಲಿ ಆರಂಭ:
ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾದ ಸಂದರ್ಭ ಈ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಇವರ ಅವಧಿಯಲ್ಲಿ ಬಹುತೇಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಒಳಾಂಗಣ ವಿನ್ಯಾಸ, ವಿದ್ಯುದ್ದೀಕರಣ, ಗ್ರಾನೈಟ್ ವರ್ಕ್ ಹಾಗೂ ಸಂಭಾಂಗಣ ನಿರ್ಮಾಣದ ಕಾರ್ಯದ ಅಂತಿಮ ಹಂತದ ಕಾರ್ಯಾಚರಣೆ ನಡೆಯಬೇಕಿತ್ತು.
ಆದರೆ ಕಳೆದ ಒಂದೆರಡು ವರ್ಷಗಳಿಂದ ಈ ಕಾರ್ಯ ನಡೆದಿರಲಿಲ್ಲ. 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಕಟ್ಟಡ ನಿರ್ಮಾಣಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದವರು ತಲಾ 5 ಲಕ್ಷ, ಸಂಸದರು ತಲಾ 5 ಲಕ್ಷ, ಶಾಸಕರು ವಿಧಾನ ಪರಿಷತ್ ಸದಸ್ಯರು ತಲಾ 1ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.
ಇಂದಿನಿಂದ ಎರಡು ದಿನಗಳ ಕಾಲ ಡಿ.ಕೆ.ಶಿ ಟೆಂಪಲ್ ರನ್:
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿನಿಂದ ಎರಡು ದಿನಗಳ ದೇಗುಲ ದರ್ಶನ ಮಾಡಲಿದ್ದಾರೆ. ತಮಿಳುನಾಡಿನ ತಿರುವಣ್ಣಮಲೈ ನಲ್ಲಿರುವ ಅರುಚಲೇಶ್ವರನ ದರ್ಶನ ಪಡೆಯಲಿರುವ ಡಿ.ಕೆ.ಸಹೋದರರು ಇದಕ್ಕೂ ಮುನ್ನ ನೋಣವಿನಕೆರೆಯ ಅಜ್ಜಯ ಪೀಠಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ.
ಈ ವೇಳೆ ಮಾತನಾಡಿದ ಡಿ.ಕೆ.ಶಿ, ಸದ್ಯದಲ್ಲೇ ಪದಗ್ರಹಣದ ದಿನಾಂಕ ನಿಗದಿ ಮಾಡ್ತೀವಿ. ಇಂದು ಸಿದ್ದರಾಮಯ್ಯರನ್ನು ಭೇಟಿಯಾಗಿ ಚರ್ಚಿಸಿ ದಿನಾಂಕ ನಿಗದಿ ಮಾಡುತ್ತೇವೆ ಎಂದರು.
ಲಾಕ್ ಡೌನ್ ಮುಂದುವರಿಕೆ ವಿಚಾರ ಪ್ರಸ್ತಾಪಿಸಿ, ಇದರ ಬಗ್ಗೆ ನಾನೇನು ನಿರ್ಧಾರ ಮಾಡೋಕೆ ಆಗಲ್ಲ. ಸರ್ಕಾರ ಏನು ತಿರ್ಮಾನ ಮಾಡುತ್ತೋ ಅದನ್ನು ಫಾಲೋ ಮಾಡುತ್ತೇವೆ. ಮಂತ್ರಿಗಳಲ್ಲಿ ಹಲವರು ವೈದ್ಯರಿದ್ದಾರೆ, ಅವರು ತೀರ್ಮಾನ ಮಾಡ್ತಾರೆ. ನಾವು ಕೇವಲ ಪ್ರಸಾದ ಸ್ವೀಕರಿಸ್ತೀವಿ ಎಂದು ಲೇವಡಿ ಮಾಡಿದರು.