ಬೆಂಗಳೂರು: ಕಳ್ಳತನ ಪ್ರಕರಣದ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸ್ ತಂಡದ ಮೇಲೆಯೇ ಆರೋಪಿಗಳ ಸಹಚರರು ಹಲ್ಲೆ ಮಾಡಿದ್ದಾರೆ.
ವಿಜಯನಗರ, ಕಾಮಾಕ್ಷಿಪಾಳ್ಯ ಹಾಗೂ ಮಾಗಡಿ ರೋಡ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಲು ಕಾಮಾಕ್ಷಿಪಾಳ್ಯ ಠಾಣೆಯ ಪಿಎಸ್ಐ ಸಂತೋಷ್ ನೇತೃತ್ವದ ತಂಡ ಧಾರವಾಡಕ್ಕೆ ಹೋಗಿತ್ತು. ಈ ವೇಳೆ, ಮೂರು ಮಂದಿ ಆರೋಪಿಗಳನ್ನು ಬಂಧಿಸುವಾಗ ಖದೀಮರ ಸಹಚರರು ಬಂಧನಕ್ಕೆ ಅಡ್ಡಿ ಪಡಿಸಿದ್ದಾರೆ.
ಪೊಲೀಸರು ಎಂದು ಹೇಳಿದರೂ ಮಾತಿನ ಚಕಮಕಿ ನಡೆಸಿ, ನಡುರಸ್ತೆಯಲ್ಲಿ ತಳ್ಳಾಟ ನಡೆಸಿದ್ದಾರೆ. ಈ ವೇಳೆ, ಪಿಎಸ್ಐ ಸಂತೋಷ್, ಎಸ್ಐ ರವಿಕುಮಾರ್ಗೆ ಸಣ್ಣಪುಟ್ಟ ಗಾಯಗಳಾಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು, ಡಿಸ್ಚಾರ್ಜ್ ಆಗಿದ್ದಾರೆ. ಈ ಬಗ್ಗೆ ಸಂತೋಷ್ ದೂರು ದಾಖಲಿಸಿದ್ದಾರೆ.