ಬೆಂಗಳೂರು : ಫೋನ್ ಕದ್ದಾಲಿಕೆ ಆರೋಪ ಮಾಡಿರುವ ಶಾಸಕ ಅರವಿಂದ ಬೆಲ್ಲದ್ ನೀಡಿದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಹೈದರಾಬಾದ್ ಅರ್ಚಕರೊಬ್ಬರಿಗೆ ಸೇರಿರುವುದನ್ನು ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದ ತಂಡ ಪತ್ತೆ ಹಚ್ಚಿದೆ. ಜೈಲಿನಲ್ಲಿ ಯುವರಾಜ್ ಸ್ವಾಮಿ ಹೆಸರಿನಲ್ಲಿ ಶಾಸಕರಿಗೆ ಕರೆ ಮಾಡಿದ್ದಾರೆ ಎನ್ನಲಾಗಿದ್ದ ನಂಬರ್ ಪರಿಶೀಲಿಸಿದಾಗ ಹೈದರಾಬಾದ್ ನಿವಾಸಿಯೊಬ್ಬರಿಗೆ ಸೇರಿದ ನಂಬರ್ ಇದಾಗಿದೆ ಎಂಬುದು ತಿಳಿದು ಬಂದಿದೆ.
ಈ ಕುರಿತು ಬೆಲ್ಲದ್ ಅವರ ಬಳಿ ತನಿಖಾಧಿಕಾರಿಗಳು ಪ್ರಶ್ನಿಸಿದಾಗ, ಕರೆ ಬಂದಿರುವ ನಂಬರ್ ಮಿಸ್ ಆಗಿದೆ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ನಾನು ಎಲ್ಲಿಗೆ ರಹಸ್ಯವಾಗಿ ಹೋದರೂ ಬೇರೆಯವರು ಗಮನಿಸುತ್ತಿದ್ದಾರೆ. ನನ್ನ ಸುತ್ತಮುತ್ತ ಅನುಮಾನಸ್ಪಾದ ವ್ಯಕ್ತಿಗಳೇ ಕಾಣಸಿಗುತ್ತಾರೆ. ನಾನು ದೆಹಲಿಗೆ ರಹಸ್ಯವಾಗಿ ಹೋಗಿದ್ದೆ.
ಆದರೂ ಕೂಡ ಎಲ್ಲರಿಗೂ ಗೊತ್ತಾಗಿತ್ತು. ಇದಕ್ಕಾಗಿಯೇ ನನಗೆ ನನ್ನ ಫೋನ್ ಟ್ರ್ಯಾಪ್ ಆಗಿರುವ ಅನುಮಾನ ಶುರುವಾಗಿತ್ತು ಎಂದು ಪೊಲೀಸರೆದುರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಕುರಿತು ಬಿಜೆಪಿ ನಾಯಕರ ಹೆಸರೇಳಿಕೊಂಡು ವಂಚನೆ ಮಾಡುತ್ತಿದ್ದ ಆರೋಪದ ಮೇಲೆ ಸಿಸಿಬಿ ವಶದಲ್ಲಿರುವ ಯುವರಾಜ್ ಬಳಿ ಈ ಕುರಿತು ಪ್ರಶ್ನಿಸಲಾಗಿದೆ ಎನ್ನಲಾಗುತ್ತಿದೆ.
ಈ ವೇಳೆ ನನಗೂ ಅರವಿಂದ ಬೆಲ್ಲದ್ ಅವರಿಗೆ ಮಾಡಿರುವ ಕರೆಗೂ ಯಾವುದೇ ಸಂಬಂಧವಿಲ್ಲ. ನನ್ನ ಬಳಿ ಮೊಬೈಲ್ ಇಲ್ಲ, ನಾನ್ಯಾರಿಗೂ ಕರೆ ಮಾಡಿಲ್ಲ, ಬೆಲ್ಲದ್ ಗೊತ್ತೇ ಇಲ್ಲ ಎಂದು ಯುವರಾಜ್ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಓದಿ: ಬೆಲ್ಲದ್ ಫೋನ್ ಕದ್ದಾಲಿಕೆ ಆರೋಪದ ಬೆನ್ನಲ್ಲೇ ಬಿಎಸ್ವೈ, ಬೊಮ್ಮಾಯಿ ಚರ್ಚೆ