ಬೆಂಗಳೂರು: ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬ ಮಾತಿದೆ... ಹಾಗೆಯೇ ಶೋಕಿಯ ಚಟಕ್ಕೆ ಇಲ್ಲೊಬ್ಬ ವ್ಯಕ್ತಿಯು ತನ್ನ ಕುಟುಂಬವನ್ನೇ ಬೀದಿಗೆ ಬೀಳುವಂತೆ ಮಾಡಿದ್ದಾನೆ. ನಡು ರಸ್ತೆಗೆ ಬಿದ್ದ ಕುಟುಂಬನ್ನು ಯಶವಂತಪುರ ಪೊಲೀಸರು ಇದೀಗ ರಕ್ಷಿಸಿ ಪುನರ್ ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ.
ಯಶವಂತಪುರದ ನಾಗವೇಣಿ (28) ಮಕ್ಕಳಾದ ಗಣೇಶ (10) ಚಿತ್ರಾ (01) ಹಾಗೂ ಒಂದು ಗಂಡು ಮಗುವನ್ನು ರಕ್ಷಿಸದ ಪೊಲೀಸರು ಹೆಮ್ಮಿಗೆಪುರದ ಸಾಂತ್ವನ ಪುನರ್ ವಸತಿ ಕೇಂದ್ರದಲ್ಲಿ ಬಿಟ್ಟಿದ್ದಾರೆ. ನಾಗವೇಣಿಯು ಗಿರಿ ಎಂಬುವನೊಂದಿಗೆ ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿದ್ದರು. ಯಶವಂತಪುರದ ಏರಿಯಾವೊಂದರಲ್ಲಿ ಬಾಡಿಗೆ ಮನೆ ಮಾಡಿ ವಾಸವಾಗಿದ್ದರು.
ಮದ್ಯಪಾನದ ಚಟ ಬೆಳೆಸಿಕೊಂಡಿದ್ದ ಗಿರಿ ಕೆಲಸಕ್ಕೆ ಹೋಗದೆ, ಮನೆಗೂ ಬರದೆ ಅಲೆಯುತ್ತಿದ್ದ. ಇದರಿಂದ ಮನೆಯ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿ ಬಿಗಾಡಯಿಸತೊಡಗಿತ್ತು. ಮನೆ ಬಾಡಿಗೆ ಹಣ ನೀಡದ ಪರಿಣಾಮ ಮನೆ ತೊರೆದು ಮಕ್ಕಳೊಂದಿಗೆ ಪಾರ್ಕ್ವೊಂದರಲ್ಲಿ ಒಂದು ವಾರದ ಕಾಲ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಬೀದಿಗೆ ಬಿದ್ದ ಕುಟುಂಬವನ್ನು ರಕ್ಷಿಸಿ ಪುನರ್ ವಸತಿ ಕೇಂದ್ರಕ್ಕೆ ಬಿಟ್ಟಿದ್ದಾರೆ.