ಬೆಂಗಳೂರು: ಸ್ಯಾಂಡಲ್ವುಡ್ನ ನಿರ್ಮಾಪಕ ಸೌಂದರ್ಯ ಜಗದೀಶ್ ಕುಟುಂಬಸ್ಥರಿಂದ ಪಕ್ಕದ ಮನೆ ಕೆಲಸ ಮಾಡುವ ಮಹಿಳೆ ಅನುರಾಧ ಮೇಲೆ ಹಲ್ಲೆ ಹಾಗೂ ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣದ ಸಂಬಂಧ ಜಗದೀಶ್ ಮಾಲೀಕತ್ವದ ಪಬ್ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು ಎಂದು ವರದಿಯಾಗಿದೆ.
ಮಹಾಲಕ್ಷ್ಮಿ ಲೇಔಟ್ ಪೊಲೀಸರು ನಿರ್ಮಾಪಕ ಸೌಂದರ್ಯ ಜಗದೀಶ್ ಒಡೆತನದ ಜಿಟ್ ಲ್ಯಾಗ್ ಪಬ್ ಪರಿಶೀಲನೆ ನಡೆಸಿದರು. ಪಬ್ ಮ್ಯಾನೇಜರ್ ಹಾಗೂ ಸಿಬ್ಬಂದಿಯ ವಿಚಾರಣೆ ಕೈಗೊಳ್ಳಲಾಗಿದೆ. ಮಹಾಲಕ್ಷ್ಮಿ ಲೇಔಟ್ ಹಾಗೂ ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರಿಂದ ಜಂಟಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಬ್ನಲ್ಲಿರುವ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿದ್ದು, ಹಲ್ಲೆಯ ಬಳಿಕ ಪಬ್ಗೆ ಬಂದಿದ್ದ ಬಗ್ಗೆ ಮತ್ತು ಮ್ಯಾನೇಜರ್ನನ್ನು ಸಂಪರ್ಕಿಸಿದ ಸಂಬಂಧ ವಿಚಾರಣೆ ನಡೆದಿದೆ ಎನ್ನುವ ಮಾಹಿತಿ ದೊರೆತಿದೆ.
ಬೆಳಗ್ಗೆ ಮನೆಯ ಬಳಿ ನಡೆದಿದ್ದ ಹೈ ಡ್ರಾಮಾ: ಸೋಮವಾರ ನಿರ್ಮಾಪಕ ಸೌಂದರ್ಯ ಜಗದೀಶ್ ಮನೆ ಮುಂದೆ ಹೈಡ್ರಾಮಾ ಕೂಡ ನಡೆದಿತ್ತು. ನಾಪತ್ತೆಯಾಗಿರುವ ಸೌಂದರ್ಯ ಜಗದೀಶ್ ಕುಟುಂಬಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ಆರೋಪಿಗಳು ಹಾಜರಾಗದ ಕಾರಣ ಮನೆ ಬಳಿಯೇ ಪೊಲೀಸರು ಆಗಮಿಸಿದ್ದರು.
ಕಮಲ್ ಪಂಥ್ ಗರಂ: ಪ್ರಕರಣ ದಾಖಲಾಗಿ ಎರಡು ದಿನವಾದರೂ ಆರೋಪಿಗಳನ್ನ ಬಂಧಿಸದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರ ವಿರುದ್ಧ ಗರಂ ಆಗಿದ್ದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣ ದಾಖಲಾಗಿ ಮೂರು ದಿನವಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಐಪಿಸಿ 354 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾದರೂ, ಇನ್ನು ಆರೋಪಿಗಳ ವಿರುದ್ಧ ಕ್ರಮ ಯಾಕೆ ಕೈಗೊಂಡಿಲ್ಲ. ಯಾರೇ ಇರಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದರು.
ಗೇಟ್ ತೆರೆಯಲು ನಿರಾಕರಣೆ: ಸೂಚನೆ ಬೆನ್ನಲೇ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸೌಂದರ್ಯ ಜಗದೀಶ್ ಮನೆ ಬಳಿ ಬಂದಿದ್ದರು. ಈ ವೇಳೆ ಮನೆಯ ಗೇಟ್ ತೆರೆಯಲು ಮನೆಯವರು ನಿರಾಕರಿಸಿದ್ದರು. ತದನಂತರ ಗೇಟ್ ಓಪನ್ ಮಾಡಿದ್ದಾಗಿ ತಿಳಿದು ಬಂದಿದೆ.