ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಆಯಾ ವಿಭಾಗದ ಡಿಸಿಪಿಗಳು ಅವರ ವ್ಯಾಪ್ತಿಗೆ ಬರುವ ಕಾಲೇಜುಗಳ ಬಳಿ ಪರೀಕ್ಷೆ ನಡೆಸಲು ಸಿಬ್ಬಂದಿ ಯಾವ ರೀತಿ ಸಿದ್ಧತೆ ನಡೆಸಿದ್ದಾರೆ ಎಂಬುವುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಆಯಾ ವಿಭಾಗದ ಡಿಸಿಪಿ, ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್, ಹಾಗೂ ಹೊಯ್ಸಳ ಪಡೆಯನ್ನು ಕಾಲೇಜು ಆವರಣದ ಹೊರಗಡೆ ಭದ್ರತೆ ನಿಯೋಜಿಸಲಾಗಿದೆ.
ಒಂದು ವೇಳೆ ಸಾಮಾಜಿಕ ಅಂತರ ಮರೆತು ವಿದ್ಯಾರ್ಥಿಗಳು, ಶಿಕ್ಷಕರು ಪರೀಕ್ಷಾ ಕೇಂದ್ರಕ್ಕೆ ಹೋದರೆ ಅಂತವರಿಗೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಿದ್ದಾರೆ. ಪರೀಕ್ಷಾ ಕೇಂದ್ರ ಪ್ರವೇಶಿಸಲು ಸಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್ ಮಾಡಿದ್ದು, ಪರೀಕ್ಷಾ ಕೇಂದ್ರ ಪ್ರವೇಶಿಸುತ್ತಲೇ ಪ್ರತಿ ವಿದ್ಯಾರ್ಥಿಗೂ ಕಡ್ಡಾಯ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ.
ಕಡ್ಡಾಯವಾಗಿ ಪರೀಕ್ಷಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಪರೀಕ್ಷಾರ್ಥಿಗಳು ಸ್ಯಾನಿಟೈಜರ್ ಮಾಡಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲೂ ಸಾಮಾಜಿಕ ಅಂತರ ಹಿನ್ನೆಲೆಯಲ್ಲಿ ಒಂದೊಂದು ಡೆಸ್ಕ್ ಅಂತರದಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದ್ದು ಶಾಲಾ ಆಡಳಿತ ಮಂಡಳಿ ಹಾಗೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಕಾಲೇಜು ಸುತ್ತ ಯಾರಾದರೂ ಅನಾಮಿಕ ವ್ಯಕ್ತಿಗಳು ಓಡಾಡಿದರೆ ಅವರನ್ನು ತಕ್ಷಣ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಯಾಕಂದ್ರೆ, ಈ ಹಿಂದೆ ದ್ವಿತೀಯ ಪಿಯುಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕೂಡ ಆಗಿತ್ತು. ಹೀಗಾಗಿ ಸದ್ಯ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.