ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕು ಪಡೆದುಕೊಂಡಿದೆ. ಇನ್ನೊಂದೆಡೆ, ತನಿಖೆಯ ವೇಗ ಹೆಚ್ಚಾದಂತೆಲ್ಲ ಪ್ರಕರಣ ಬೇರೆ ಬೇರೆ ಆಯಾಮಗಳನ್ನು ಪಡೆಯುತ್ತಿದೆ.
ಈ ಗಲಭೆಯಲ್ಲಿ ಭಾಗಿಯಾಗಿದ್ದ 40 ಮಂದಿಗೆ ಉಗ್ರರ ಲಿಂಕ್ ಇದೆ ಎನ್ನುವ ಮಹತ್ವದ ಅಂಶ ಸಿಸಿಬಿ ಟೆಕ್ನಿಕಲ್ ಇನ್ವೆಸ್ಟಿಗೇಶನ್ನಲ್ಲಿ ಬಯಲಾಗಿದೆ. ಹಿಂಸಾತ್ಮಕ ಕೃತ್ಯದಲ್ಲಿ ಭಾಗಿಯಾಗಿದ್ದವರು ಈ ಹಿಂದೆ ನಡೆದ ಚರ್ಚ್ ಸ್ಟ್ರೀಟ್ ಸ್ಫೋಟ, ಮಲ್ಲೇಶ್ವರಂ ಬಾಂಬ್ ಸ್ಫೋಟ ಹಾಗೂ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿಗಳ ಜೊತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಗಿದೆ.
ಈಗಾಗಲೇ ಬಂಧಿತನಾಗಿರುವ ಸಮಿವುದ್ದೀನ್ ವಿಚಾರಣೆಗೂ ವೇಗ ಕೊಟ್ಟಿರುವ ಪೊಲೀಸರು ಗಲಭೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಉಗ್ರ ಚಟುವಟಿಕೆಯ ಸಂಬಂಧವಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ದಾಖಲಾಗಿರುವ ಪ್ರಕರಣಗಳಿಗೆ ತನಿಖಾಧಿಕಾರಿಗಳ ನೇಮಕ
ದಾಖಲಾಗಿರುವ ಪ್ರಕರಣಕ್ಕೂ ತನಿಖಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ನವೀನ್ ಹಾಗೂ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿಗೆ ಎಸಿಪಿ ರವಿ ಪ್ರಸಾದ್ ತನಿಖಾಧಿಕಾರಿಯಾದರೆ, ಶಾಸಕರ ಆಪ್ತ ಮುನೇಗೌಡರ ಮನೆ ಮೇಲಿನ ದಾಳಿಗೆ ಜೀವನ್ ಭೀಮಾನಗರ ಇನ್ಸ್‌ಪೆಕ್ಟರ್ ಅನಿಲ್ ತನಿಖಾಧಿಕಾರಿಯಾಗಿದ್ದಾರೆ.
ಗಲಭೆ ಸಂಬಂಧ ಒಟ್ಟು 66 ಎಫ್ಐಆರ್ ಆಗಿದ್ದು, ನಗರ ಪೂರ್ವ ವಿಭಾಗದ ಎಲ್ಲ ಇನ್ಸ್ಪೆಕ್ಟರ್ಗಳಿಗೂ ಇಂತಿಷ್ಟು ಪ್ರಕರಣ ಎಂಬಂತೆ ವಹಿಸಿ ತನಿಖೆ ಮಾಡಲು ಸೂಚಿಸಲಾಗಿದೆ. ಇದರ ನಡುವೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಡಿ.ಜೆ.ಹಳ್ಳಿ ಠಾಣೆಗೆ ಭೇಟಿ ನೀಡಿ ತನಿಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಜೊತೆಗೆ ಪೊಲೀಸರಿಗೆ ಧೈರ್ಯ ತುಂಬಿದ್ದಾರೆ.
ಮುಂದುವರೆದಿರುವ ವಾಜೀದ್ ವಿಚಾರಣೆ
ಇನ್ನೊಂದೆಡೆ, ಬಂಧಿತನಾಗಿರುವ ಕರ್ನಾಟಕ ಟಿಪ್ಪು ಟೈಗರ್ ಅಲ್ಫತ್ ಸಂಘಟನೆ ಅಧ್ಯಕ್ಷ ವಾಜೀದ್ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ. ವಾಜೀದ್ ನೀಡಿದ ಮಾಹಿತಿಯ ಮೇಲೆ ಅಫ್ಜಲ್, ತೌಸಿಫ್ ಎಂಬುವವರನ್ನು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿ, ಅವರ ವಿಚಾರಣೆ ನಡೆಸುತ್ತಿದ್ದಾರೆ.