ಬೆಂಗಳೂರು: ಒಂದೆಡೆ ಕೊರೊನಾ, ಮತ್ತೊಂದೆಡೆ ಭಾನುವಾರದ ಲಾಕ್ ಡೌನ್. ಇದರ ಮಧ್ಯೆ ನಗರದಲ್ಲಿ ಪೊಲೀಸರ ರಿವಾಲ್ವಾರ್ ಸದ್ದು ಮಾಡಿದೆ.
ಭರತ್ ಅಲಿಯಾಸ್ ಬಾಬು ಅರುಣ್ ಕುಮಾರ್ ಅಲಿಯಾಸ್ ಕೊಳಕನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಜುಲೈ 23 ರಂದು ಹೆಸರುಘಟ್ಟ ಬಳಿ ರಾಜಶೇಖರ್ ಎಂಬುವರ ಮೇಲೆ ಆರು ಜನರ ತಂಡ ದಾಳಿ ಮಾಡಿತ್ತು. ನಂತರ ಈ ಘಟನೆ ಸಂಬಂಧ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.
ಕೆಲ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಇನ್ನೂ ಕೆಲವರ ಬಂಧನಕ್ಕೆ ಮುಂದಾಗಿದ್ರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಮೊದಲು ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆರೋಪಿಗಳು ಶರಣಾಗದೆ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಬಂಧಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡ ಸಿಬ್ಬಂದಿಗೂ ಚಿಕಿತ್ಸೆ ನೀಡಲಾಗಿದೆ.
ಘಟನೆಗೆ ಕಾರಣ ಏನು:
ರಾಜಶೇಖರ್ ಎಂಬುವರ ಹತ್ಯೆಗೆ ಸುಪಾರಿ ಪಡೆದಿದ್ದ ಆರೋಪಿ ಭರತ್: ಭೂವಿವಾದಕ್ಕೆ ಸಂಬಂಧಿಸಿದಂತೆ ರಾಜಶೇಖರ್ನ್ನು ಹತ್ಯೆ ನಡೆಸುವಂತೆ ಭರತ್ಗೆ ಶ್ರೀನಿವಾಸ್ ಎಂಬಾತ 10 ಲಕ್ಷ ಹಣ ಡೀಲ್ ಮಾಡಿ 1ಲಕ್ಷ ಮುಂಗಡವಾಗಿ ನೀಡಿದ್ದ. ರಾಜಶೇಖರ್ ಹಾಗೂ ಶ್ರೀನಿವಾಸ್ ಸಂಬಂಧಿಕಾರಾಗಿದ್ದು, ಒಂದೇ ಕುಟುಂಬದ ಅಕ್ಕ-ತಂಗಿಯರನ್ನು ಮದುವೆಯಾಗಿದ್ರು. ಇವರ ಹೆಂಡತಿಯರ ತಂದೆಯ ಬಳಿ ಬಹಳಷ್ಟು ಆಸ್ತಿ ಇದ್ದು, ಇದನ್ನು ಪಡೆದುಕೊಳ್ಳಬೇಕೆಂದು ಶ್ರೀನಿವಾಸ್ ಈ ಪ್ಲಾನ್ ಮಾಡಿದ್ದ.
ಇನ್ನು ಹೆಸರುಘಟ್ಟ ಬಳಿ ಇರುವ ಆಸ್ತಿಯನ್ನು ರಾಜಶೇಖರ್ ಅವರ ಹೆಸರಿಗೆ ಮಾಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಶ್ರಿನಿವಾಸ್ ಇದು ತನಗೆ ಬೇಕೆಂದು ಗಲಾಟೆ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ರಾಜಶೇಖರನನ್ನ ಮೊದಲು ಹತ್ಯೆ ಮಾಡಿ ನಂತ್ರ ಆತನ ಹೆಂಡತಿ ಹಾಗೂ ಆಕೆಯ ತಮ್ಮನನ್ನು ಕೊಲೆ ಮಾಡಲು ಭರತ್ಗೆ ಸುಪಾರಿ ನೀಡಲಾಗಿತ್ತು. ಈ ಹಿನ್ನೆಲೆ ಸಿನಿಮಾ ರೀತಿಯಲ್ಲಿ ಕೊಲೆ ಮಾಡುವುದಕ್ಕೆ ಭರತ್ ಮುಂದಾಗಿದ್ದ.
ಸಿನಿಮಾ ಶೈಲಿ:
ಜುಲೈ 23 ರಂದು ಆರೋಪಿಗಳು ಬೈಕಲ್ಲಿ ರಾಜಶೇಖರ್ಗೆ ಗುದ್ದಿ ಗಲಾಟೆ ಮಾಡಿದ್ದಾರೆ. ಇದೇ ವೇಳೆಗೆ ಮತ್ತೊಂದು ತಂಡ ಕಾರಲ್ಲಿ ಬಂದು ಹಲ್ಲೆ ಮಾಡಲು ಮುಂದಾಗುತ್ತದೆ. ಇದೆಲ್ಲಾ ಪೂರ್ವ ನಿಯೋಜಿತ ಪ್ಲಾನ್ ಆಗಿರುತ್ತದೆ. ಆದರೆ, ಸ್ಥಳೀಯರು ಆ ಸಮಯಕ್ಕೆ ಜಮಾವಣೆಗೊಂಡಿದ್ದರಿಂದ ಪ್ಲಾನ್ ವಿಫಲವಾಗುತ್ತದೆ. ಇನ್ನು ರಾಜಶೇಖರ್ ಘಟನೆ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಪೊಲೀಸರು ತನಿಖೆಯಿಂದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.