ಬೆಂಗಳೂರು: ರಾಜ್ಯ ಸರ್ಕಾರ ಮಾದಕ ವಸ್ತುಗಳ ತನಿಖೆಯಲ್ಲಿ ಸರ್ವ ಸ್ವತಂತ್ರವನ್ನು ಪೊಲೀಸರಿಗೆ ನೀಡಿದ್ದು, ಅವರು ಯಾರ ಪ್ರಭಾವಕ್ಕೂ ಒಳಗಾಗದೆ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ಪ್ರತಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿಗಳ ಹೇಳಿಕೆಗಳು ಆಧಾರ ರಹಿತವಾಗಿವೆ. ಈ ಕುರಿತು ಅವರ ಬಳಿ ಯಾವುದೇ ಸಾಕ್ಷಿಗಳಿದ್ದರೆ ಬಹಿರಂಗಪಡಿಸಲಿ. ಅದನ್ನು ಕೂಡ ತನಿಖೆ ನಡೆಸುತ್ತೇವೆ ಎಂದು ಸಿದ್ದರಾಮಯ್ಯ ಹಾಗೂ ಹೆಚ್ಡಿಕೆ ವಿರುದ್ದ ಟಾಂಗ್ ನೀಡಿದ್ದಾರೆ.
2018ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸಿಕ್ಕ ದೊಡ್ಡ ಪ್ರಮಾಣದ ಡ್ರಗ್ಸ್ ತನಿಖೆಯನ್ನು ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಂಡಿದ್ದರೇ ಆ ಪ್ರಕರಣದಲ್ಲುಏ ಡ್ರಗ್ಸ್ ಪ್ಲೇಯರ್ಗಳನ್ನು ಹಿಡಿಯಲು ಸಾಧ್ಯವಿತ್ತು. ಅಂದು ಪ್ರಕರಣದ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿದ್ದರೆ ರಾಜ್ಯದಲ್ಲಿ ಇಂದು ಡ್ರಗ್ಸ್ ದಂಧೆ ಹತೋಟಿಯಲ್ಲಿರುತ್ತಿತ್ತು. ಆದರೆ, ಅಂದಿನ ಸಮಯದಲ್ಲಿ ಮೇಲಧಿಕಾರಿಗಳ ಹಾಗೂ ತನಿಖಾಧಿಕಾರಿಗಳ ಕೈ ಕಟ್ಟಿಹಾಕಿದ್ದರು ಎಂಬುದು ಪ್ರಬಲವಾಗಿ ಕೇಳಿ ಬರುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಈಚೆಗೆ ಸಿಕ್ಕ ಡ್ರಗ್ಸ್ ದಂಧೆಯ ತನಿಖೆಯು ಪ್ರಾರಂಭವಾಗಿ ಎರಡು ವಾರ ಮಾತ್ರವಾಗಿದೆ. ಎರಡು ಪ್ರಕರಣಗಳಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರಿಗೂ ಸಹ ಬಲೆ ಬೀಸಲಾಗಿದೆ. ಅವರನ್ನು ಕೂಡ ಶೀಘ್ರವಾಗಿ ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಪೊಲೀಸರ ಕಾರ್ಯಾಚರಣೆಗೆ ರಾಜ್ಯದ ಹಾಗೂ ದೇಶದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಾಧ್ಯಮ ಹಾಗೂ ಸಾರ್ವಜನಿಕರು ನಿಗಾ ವಹಿಸಿದ್ದಾರೆ. ಸರ್ಕಾರ ತನಿಖೆಯ ಬಗ್ಗೆ ಸಂಪೂರ್ಣ ಪಾರದರ್ಶಕವಾಗಿದೆ. ಹೀಗಿರುವಾಗ ಪದೇ, ಪದೇ ಪೊಲೀಸರ ಕಾರ್ಯದ ಬಗ್ಗೆ ಸಂಶಯಾತ್ಮಕ ಹೇಳಿಕೆ ನೀಡುವುದು ಯಾರನ್ನೋ ರಕ್ಷಣೆ ಮಾಡುವಂತಿದೆ ಹಾಗೂ ತನಿಖೆಯ ದಾರಿ ತಪ್ಪಿಸುವ ಹುನ್ನಾರ ನಡೆಸಿದಂತೆ ಕಾಣುತ್ತದೆ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.
ತನಿಖೆ ನಡೆಸುತ್ತಿರುವ ಪೊಲೀಸರ ಬಗ್ಗೆ ಸಂಶಯ ವ್ಯಕ್ತ ಪಡಿಸುವುದು, ಡ್ರಗ್ಸ್ ದಂಧೆಕೋರರಿಗೆ ಸಹಾಯ ಮಾಡಿದಂತೆ ಭಾಸವಾಗುತ್ತದೆ ಎಂದು ತನಿಖಾಧಿಕಾರಿಗಳ ಕಾರ್ಯವನ್ನು ಪ್ರಶ್ನಿಸಿದ್ದ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಮೇಲೆ ಆರೋಪಿಸಿದರು.
ನಾವೆಲ್ಲರೂ ಒಟ್ಟಾಗಿ ತನಿಖೆಗೆ ಸಹಕರಿಸಬೇಕು ಹಾಗೂ ಡ್ರಗ್ಸ್ ದಂಧೆಕೋರರ ವಿರುದ್ಧ ದನಿ ಎತ್ತಬೇಕು. ಸರ್ಕಾರ ಡ್ರಗ್ಸ್ ವಿಷಯದಲ್ಲಿ ನಿಷ್ಠುರವಾಗಿಯೂ ನ್ಯಾಯ ಸಮ್ಮತವಾಗಿಯೂ ತನಿಖೆಯನ್ನು ಮುಂದುವರಿಸುತ್ತಿದೆ ಇಂತಹ ಹೇಳಿಕೆಯಿಂದ ಪೊಲೀಸರು ಎಂದು ದೃತಿಗೆಡುವುದಿಲ್ಲ ಎಂದು ಗೃಹ ಸಚಿವ ಬೊಮ್ಮಾಯಿ ಸ್ಪಷ್ಟಪಡಿಸಿದರು.