ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಹಮ್ಮಿಕೊಂಡಿರುವ ರಾಜಭವನ ಚಲೋ ರ‍್ಯಾಲಿಗೆ ವಿಶೇಷ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಬೆಂಗಳೂರಿನ ಕೋಡೆ ವೃತ್ತದಲ್ಲಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ತೆರಳಿ ಸ್ವಾತಂತ್ರ್ಯ ಉದ್ಯಾನವನ ತಲುಪಿ ಅಲ್ಲಿ ಪ್ರತಿಭಟನಾ ಸಭೆ ನಡೆಸಿದ ಬಳಿಕ ರಾಜಭವನದತ್ತ ಪ್ರತಿಭಟನಾಕಾರರು ಮೆರವಣಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಸದ್ಯ ಫ್ರೀಡಂ ಪಾರ್ಕ್ ಸುತ್ತಮುತ್ತ 500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಭಾರಿ ಭದ್ರತೆ ಒದಗಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಮುಖಂಡರು ಮಾಹಿತಿ ಪ್ರಕಾರ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದು, ಈ ಹಿನ್ನೆಲೆ ಪ್ರತಿಭಟನಾಕಾರರ ನಿಯಂತ್ರಣಕ್ಕಾಗಿ ಫ್ರೀಡಂ ಪಾರ್ಕ್ ಮೌರ್ಯ ವೃತ್ತ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಮೀಪ ಸೇರಿದಂತೆ ವಿವಿಧೆಡೆ ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಖುದ್ದು ಹಾಜರಾಗಿ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯಲ್ಲೂ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನ ಸಮೀಪವೇ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದ್ದು, ರಾಜಭವನ ಚಲೋ ರ‍್ಯಾಲಿಗೆ ಇಲ್ಲಿಯೇ ತಡೆಯೊಡ್ಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಓದಿ: ಕೃಷಿ ಕಾಯ್ದೆ ಖಂಡಿಸಿ, ಕಾಂಗ್ರೆಸ್ನಿಂದ ಇಂದು ರಾಜಭವನ ಚಲೋ!
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನಿಲುವು ಖಂಡಿಸಿ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಅತ್ಯಂತ ಪ್ರಮುಖ ಹೋರಾಟ ಇದಾಗಿದ್ದು, ಇದನ್ನು ವ್ಯವಸ್ಥಿತವಾಗಿ ನಿಯಂತ್ರಿಸಲು ಸರ್ಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ ಎಂಬ ಆರೋಪವನ್ನು ಪ್ರತಿಪಕ್ಷ ನಾಯಕರು ಮಾಡುತ್ತಿದ್ದಾರೆ. ಭದ್ರತೆಯ ದೃಷ್ಟಿಯಿಂದ ನಿಯೋಜಿತ ಪೊಲೀಸರ ಸಂಖ್ಯೆಯನ್ನು ಗಮನಿಸಿದಾಗಲೂ ಇದು ನಿಜ ಅನಿಸುತ್ತದೆ ಎಂದಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಕಾಂಗ್ರೆಸ್ ನಾಯಕರು ಎಲ್ಲಾ ರೀತಿಯ ಹೋರಾಟವನ್ನು ಭಾಷಣವನ್ನು ಪೂರ್ಣಗೊಳಿಸಿ ರಾಜಭವನದತ್ತ ಮೆರವಣಿಗೆ ತೆರಳಲಿದ್ದು, ಆ ವೇಳೆ ಇನ್ನಷ್ಟು ಪೊಲೀಸರನ್ನು ನಿಯೋಜಿಸುವ ಸಾಧ್ಯತೆ ಹೆಚ್ಚಿದೆ.