ಬೆಂಗಳೂರು: ಉದ್ಯಮಿ ಗೋವಿಂದ್ ಪೂಜಾರಿ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿದ ಪ್ರಕರಣದ ಏಳು ಜನ ಆರೋಪಿಗಳ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದೆ. ಆರೋಪಿಗಳಾದ ಚೈತ್ರಾ, ಗಗನ್, ರಮೇಶ್, ಧನರಾಜ್, ಶ್ರೀಕಾಂತ್, ಪ್ರಜ್ವಲ್ ಹಾಗೂ ಚೆನ್ನನಾಯ್ಕ್ರನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಆರೋಪಿಗಳ ವಿಚಾರಣೆ ಬಹುತೇಕ ಅಂತ್ಯವಾಗಿದೆ. ಮಧ್ಯಾಹ್ನದ ವೇಳೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಿಸಿಬಿ ಪೊಲೀಸರು ಅಗತ್ಯವಿದ್ದಲ್ಲಿ ಮಾತ್ರ ಪುನಃ ಕಸ್ಟಡಿಗೆ ಕೇಳುವ ಸಾಧ್ಯತೆಯಿದೆ. ವಂಚನೆ ಆರೋಪದಡಿ ಸಿಸಿಬಿ ಪೊಲೀಸರಿಂದ ಬಂಧನವಾಗಿದ್ದ ಚೈತ್ರಾ ಸೇರಿದಂತೆ ಏಳು ಜನ ಆರೋಪಿಗಳ ತಂಡವನ್ನು 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಸೆಪ್ಟೆಂಬರ್ 13 ರಂದು ನಗರದ 1ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿತ್ತು.
ಪ್ರಕರಣದ ಹಿನ್ನೆಲೆ: ವಂಚನೆ ಆರೋಪ ಮಾಡಿದ್ದ ಗೋವಿಂದ ಬಾಬು ಪೂಜಾರಿ ಪೊಲೀಸರಿಗೆ ನೀಡಿದ ದೂರಿನ ವಿವರದಲ್ಲಿ "ನಾನು ಉಡುಪಿಯ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಕಳೆದ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಈ ಸಂದರ್ಭದಲ್ಲಿ ಕೆಲವು ಬೆಂಬಲಿಗರು ಚೈತ್ರಾ ಅವರನ್ನು ನನಗೆ ಪರಿಚಯಿಸಿದ್ದರು. ನನ್ನ ಮುಗ್ಧತೆಯನ್ನು ಬಳಸಿಕೊಂಡ ಚೈತ್ರಾ, ತಾನು ಹಿಂದೂಪರ ಸಂಘಟನೆಯಲ್ಲಿರುವುದರಿಂದ ಆರ್ಎಸ್ಎಸ್ಎಸ್ ವರಿಷ್ಠರಿಗೂ ಹತ್ತಿರ, ಪ್ರಧಾನಿ ಕಚೇರಿಯಲ್ಲಿಯೂ ಪ್ರಭಾವಿಯಾಗಿದ್ದೇನೆ. ಈ ಎಲ್ಲ ಪ್ರಭಾವಗಳನ್ನು ಬಳಸಿ ಟಿಕೆಟ್ ಕೊಡಿಸುವುದಾಗಿ ನಂಬಿಸಿದ್ದರು. ನಂತರ ಕೇಂದ್ರದ ಆರ್ಎಸ್ಎಸ್ ಪ್ರಮುಖ ಎಂದು ವಿಶ್ವನಾಥ್ ಎಂಬಾತನನ್ನು ಪರಿಚಯಿಸಿದ್ದರು. ಅವರ ನಿರ್ದೇಶನದ ಮೇರೆಗೆ ಹಂತ ಹಂತವಾಗಿ ಕೋಟ್ಯಂತರ ರೂಪಾಯಿ ಹಣ ಪಡೆದಿದ್ದರು."
"ಒಂದು ವೇಳೆ ಟಿಕೆಟ್ ಕೈ ತಪ್ಪಿದರೆ ಹಣ ವಾಪಸ್ ನೀಡುವ ಭರವಸೆ ನೀಡಿದ್ದರು. ಆದರೆ ಮಾರ್ಚ್ ಆರಂಭದಲ್ಲಿ ಗೋವಿಂದ ಬಾಬು ಅವರಿಗೆ ಕರೆ ಮಾಡಿದ್ದ ಆರೋಪಿ ಗಗನ್ ಕಡೂರು, ವಿಶ್ವನಾಥ್ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದರು. ಅನುಮಾನಗೊಂಡ ಗೋವಿಂದ್ ಬಾಬು ಕಾಶ್ಮೀರದಲ್ಲಿರುವ ತಮ್ಮ ಸ್ನೇಹಿತ, ನಿವೃತ್ತ ಸೇನಾಧಿಕಾರಿಯೊಬ್ಬರಿಗೆ ಕರೆ ಮಾಡಿ ವಿಚಾರಿಸಿದಾಗ ಆರ್ಎಸ್ಎಸ್ನಲ್ಲಿ ವಿಶ್ವನಾಥ್ ಹೆಸರಿನ ಯಾವ ಹಿರಿಯ ನಾಯಕರೂ ಇಲ್ಲ ಎಂಬುದು ಖಚಿತವಾಗಿತ್ತು. ಈ ಬಗ್ಗೆ ವಿಚಾರಿಸಿ ಹಣ ವಾಪಸ್ ಕೇಳಿದಾಗ ವಿಷದ ಬಾಟಲಿ ತೋರಿಸಿ ಆತ್ಮಹತ್ಯೆಯ ನಾಟಕವಾಡಿದ್ದ ಚೈತ್ರಾ ಬಳಿಕ ಹಣ ವಾಪಸ್ ನೀಡಲು ಸಮಯಾವಕಾಶ ಕೇಳಿದ್ದರು".
"ಈ ಬಗ್ಗೆ ಮತ್ತಷ್ಟು ವಿಚಾರಿಸಿದಾಗ ಕೆ.ಆರ್.ಪುರಂನಲ್ಲಿ ರಸ್ತೆ ಬದಿ ಕಬಾಬ್ ಮಾರುವವನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸದಸ್ಯ ಎಂದು ತೋರಿಸಿರುವುದು ಹಾಗೂ ಚಿಕ್ಕಮಗಳೂರಿನಲ್ಲಿ ಸಾಮಾನ್ಯ ವ್ಯಕ್ತಿಗೆ ಆರ್ಎಸ್ಎಸ್ ಪ್ರಚಾರಕನಂತೆ ಮೇಕಪ್ ಮಾಡಿಸಿ ತಮಗೆ ಪರಿಚಯಿಸಿ ವಂಚಿಸಿರುವುದು ತಿಳಿದು ಬಂದಿತ್ತು. ತಕ್ಷಣ ಚೈತ್ರಾ, ಗಗನ್ ಕಡೂರು, ಅಭಿನವ ಹಾಲಶ್ರೀ ಸ್ವಾಮೀಜಿ, ರಮೇಶ್, ಧನರಾಜ್, ನಾಯ್ಕ್, ಶ್ರೀಕಾಂತ್, ಪ್ರಸಾದ್ ಬೈಂದೂರು ಎಂಬವರ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಗೆ ದೂರು ನೀಡಲಾಯಿತು."
ಇದನ್ನೂ ಓದಿ: ನಮ್ಮ ಪಕ್ಷಕ್ಕೂ, ಚೈತ್ರಾ ಕುಂದಾಪುರ ಅವರಿಗೂ ಸಂಬಂಧ ಇಲ್ಲ: ಪ್ರಹ್ಲಾದ್ ಜೋಶಿ