ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಜೊತೆಗೆ ಓಮಿಕ್ರಾನ್ ಆತಂಕ ಶುರುವಾಗಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರ ಹೊಸ ವರ್ಷ ಆಚರಣೆಗೆ ಒಪ್ಪಿಗೆ ಸೂಚಿಸಿದ್ದು, ಆದರೆ ಸಾರ್ವಜನಿಕವಾಗಿ ಆಚರಣೆಗೆ ನಿರ್ಬಂಧ ವಿಧಿಸಿದೆ. ನಗರದಲ್ಲಿ ಈ ಬಾರಿಯೂ ಹೊಸವರ್ಷದ ಆಚರಣೆಗೆ ಅವಕಾಶವಿಲ್ಲ ಎಂದು ನಗರದ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.
ಈ ಸಂಬಂಧ ನಗರದ ವೈಟ್ ಫೀಲ್ಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈ ಹಿನ್ನೆಲೆ ಹೊಸವರ್ಷದ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಪಬ್, ಬಾರ್ ಗಳಲ್ಲಿ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಇನ್ನು ಎಂಜಿ ರೋಡ್, ಬ್ರಿಗೇಡ್ ರೋಡ್ ನಲ್ಲಿ ಆಚರಣೆಗೆ ಅವಕಾಶವಿಲ್ಲ. ಈ ಸಂಬಂಧ ಸರ್ಕಾರದ ಜೊತೆ ಚರ್ಚೆ ನಡೆಸಿ ಆದೇಶ ಜಾರಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 31ರಂದು ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬ್ರಿಗೇಡ್, ಎಂಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಅವಕಾಶವಿಲ್ಲ. ಅನಾವಶ್ಯಕ ಓಡಾಟ ಸುತ್ತಾಟಕ್ಕೆ ನಗರದಲ್ಲಿ ಅವಕಾಶ ಇರೋದಿಲ್ಲ ಎಂದಿದ್ದಾರೆ. ಒಂದು ವೇಳೆ, ಈ ಎಲ್ಲಾ ನಿಯಮವನ್ನು ಮೀರಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಖಡಕ್ ಎಚ್ಚರಿಕೆ ನೀಡಿದ್ದರು.
ಬಂದ್ ಬಗ್ಗೆ ನಮ್ಮನ್ನು ಯಾರೂ ಸಂಪರ್ಕಿಸಿಲ್ಲ
ಬೆಳಗಾವಿ ವಿಚಾರವಾಗಿ ಎಂಇಎಸ್ ನಡೆಸುತ್ತಿರುವ ಪುಂಡಾಟ ವಿರೋಧಿಸಿ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ನಡೆಸಲು ಕರೆ ನೀಡಿವೆ. ಬಂದ್ ವಿಚಾರವಾಗಿ ಮಾತನಾಡಿದ ಅವರು, ಬಂದ್ ಬಗ್ಗೆ ಯಾರು ಅಪ್ರೋಚ್ ಮಾಡಿಲ್ಲ. ಒತ್ತಾಯ ಪೂರ್ವಕವಾಗಿ ಅಡ್ಡಿ ಪಡಿಸಲು ಅವಕಾಶವಿಲ್ಲ ಎಂದರು.
ಈ ವಿಚಾರವಾಗಿ ಈವರೆಗೂ ಯಾರೊಬ್ಬರೂ ನಮ್ಮನ್ನು ಸಂಪರ್ಕಿಸಿಲ್ಲ. ನಾಗರಿಕರು ಸ್ವ ಇಚ್ಛೆಯಿಂದ ಬಂದ್‌ಗೆ ಸಹಕರಿಸಿದರೆ ನಮ್ಮ ಅಭ್ಯಂತರವಿಲ್ಲ. ಆದರೆ ಬಂದ್ ಮಾಡುವಂತೆ ಬಲವಂತಪಡಿಸಿದರೆ, ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ. ಇದಕ್ಕೆ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಇನ್ನೂ ಮಾಸಿಕ ಜನಸಂಪರ್ಕ ದಿವಸ್ ಸಭೆಯನ್ನು ವೈಟ್ ಫೀಲ್ಡ್ ವಿಭಾಗ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮಕ್ಕೆ ಪೊಲೀಸ್ ಆಯುಕ್ತ ಕಮಲ್ ಪಂತ್ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಜನ ಭಾಗವಹಿಸಿದ್ದು, ತಮ್ಮ ಸಮಸ್ಯೆಗಳನ್ನು ಪೊಲೀಸ್ ಆಯುಕ್ತರ ಮುಂದೆ ಹೇಳಿಕೊಂಡರು, ಮತ್ತೆ ಕೆಲವು ಸಲಹೆ ನೀಡಿದರು.
ಸಿಸಿಟಿವಿ, ಬೀದಿ ದೀಪಗಳ ಸಮಸ್ಯೆ ಬಗೆ ಹರಿಸಲು ಕ್ರಮ ಅಗತ್ಯ
ಸಭೆಯಲ್ಲಿ ಪ್ರಮುಖ ಸಮಸ್ಯೆಗಳಾದ ಸಿ.ಸಿ.ಟಿವಿ, ಬೀದಿ ದೀಪಗಳ ಸಮಸ್ಯೆ, ಟ್ರಾಫಿಕ್ ಸಮಸ್ಯೆ, ಕಸದ ಸಮಸ್ಯೆ, ಅನಾವಶ್ಯಕವಾಗಿ ವಾಹನಗಳ ತಪಾಸಣೆ, ರಸ್ತೆಗಳಲ್ಲಿ ಅಡ್ಡಾದಿಡ್ಡಿ ವಾಹನಗಳ ಪಾರ್ಕ್, ಗಾಂಜಾ ಸೇವನೆ, ಯುವಕರ ವ್ಹೀಲಿಂಗ್ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರುಗಳು ಬಂದವು. ಪೊಲೀಸ್ ಇಲಾಖೆಗೆ ಸಂಬಂಧಿಸದ ಮೂಲ ಸೌಕರ್ಯಗಳ ಸಮಸ್ಯೆಗಳು ಸಹ ಸಭೆಯಲ್ಲಿ ಕೇಳಿ ಬಂದವು. ಕೆಲವು ದೂರುಗಳಿಗೆ ಸ್ಥಳದಲ್ಲೇ ಪರಿಹಾರವನ್ನು ತಿಳಿಸಿದರು.
ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನ ಆಲಿಸಿದ ನಂತರ ಮಾತನಾಡಿದ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ವಿಶ್ವ ಮಟ್ಟದಲ್ಲಿ ಅಭಿವೃದ್ಧಿಗೊಂಡಿದೆ, ಅದರಲ್ಲೂ ವೈಟ್ ಫೀಲ್ಡ್ ಸಾಕಷ್ಟು ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದೆ. ಮೂಲ ಸೌಕರ್ಯಗಳನ್ನು, ಸಾರ್ವಜನಿಕರಿಗೆ ಭದ್ರತೆ ಕಲ್ಪಿಸುವುದು ಪ್ರಮುಖವಾಗಿದೆ ಎಂದು ಹೇಳಿದರು.
ಬೆಂಗಳೂರು ನಗರದಲ್ಲೇ ವೈಟ್ ಫೀಲ್ಡ್ ವಿಭಾಗ ಪ್ರಬುದ್ದ ಕ್ಷೇತ್ರ. ವೈಟ್ ಫೀಲ್ಡ್ ಬೆಂಗಳೂರು ಮಟ್ಟದಲ್ಲಿ ಚರ್ಚೆಯಾಗಿರುವ ಪ್ರದೇಶವಾಗಿದೆ. ಇಲ್ಲಿ ನೂರಾರು ಸಂಖ್ಯೆಯಲ್ಲಿ ಐಟಿಬಿಟಿ ಕಂಪನಿಗಳು ನಿರ್ಮಾಣವಾಗಿದೆ. ಮತ್ತು ಮನೆಗಳು ತಲೆ ಎತ್ತಿವೆ ಆದರಿಂದ ಸಾಕಷ್ಟು ಸಮಸ್ಯೆ ಕಂಡುಬರುತ್ತಿದೆ. ನಮ್ಮ ಇಲಾಖೆ ನಿಮ್ಮ ಎಲ್ಲಾ ದೂರುಗಳಿಗೆ ನಿಷ್ಠೆಯಿಂದ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡುತ್ತೆ ಎಂದರು.
ಸಾರ್ವಜನಿಕ ಸಲಹೆ , ಸೂಚನೆ ಪಡೆಯಲು ಪೋಲಿಸ್ ಠಾಣೆಯಲ್ಲಿ ಕೆಲವು ವೇಳೆ ಬಿಡುವಿಲ್ಲದ ಕರ್ತವ್ಯದಲ್ಲಿ ತಲ್ಲೀನನಾಗಿರುವ ಕಾರಣ ದೂರು ಆಲಿಸಲು ಅಸಾಧ್ಯವಾಗಿದೆ. ಹಾಗಾಗಿ ಸಾರ್ವಜನಿಕರ ದೂರು, ಸಲಹೆಗಳನ್ನು ಪಡೆಯುವ ಉದ್ದೇಶದಿಂದ ಮಾಸಿಕ ಸಭೆ ಪ್ರಾರಂಭಿಸಲಾಗಿದೆ ಎಂದರು.
ಬೀದಿ ದೀಪಗಳು ಕಾರ್ಯ ನಿರ್ವಹಿಸದೇ ಹೊದರೆ ಅಪರಾಧ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ, ಆಧ್ಯಾವ ಪೋಲಿಸ್ ಠಾಣೆಗಳಲ್ಲಿ ಪೊಲೀಸ್ ಚೌಕಿ ಬೇಡಿಕೆ ಇದೆ. ನಗರದಲ್ಲಿ ಬೀದಿ ದೀಪಗಳ ಕೊರತೆ, ಕೆಲವು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಬಂದಿವೆ ಇದನ್ನ ಗಮನದಲ್ಲಿಟ್ಟುಕೊಂಡು ಆದಷ್ಟು ಬೇಗ ಸರಿಪಡಿಸಲು ನಮ್ಮ ಅಧಿಕಾರಿಗಳು ಮುಂದಾಗುತ್ತಾರೆ ಎಂದರು.
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಕ್ರಮ
ದಿನದಿಂದ ಹೆಚ್ಚುತ್ತಿರು ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಸಲುವಾಗಿ ವೈಟ್ ಫೀಲ್ಡ್ ವಿಭಾಗದಲ್ಲಿ ಕಳೆದ ಒಂದು ವರ್ಷದ ಹಿಂದೆ ಟ್ರಾಫಿಕ್ ಎಸಿಪಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಯುವಕರು ಗಾಂಜಾ ಸೇವನೆ ಬಗ್ಗೆ ಮಾತನಾಡಿ, ಕಳೆದ ಮೂರು-ನಾಲ್ಕು ವರ್ಷದಲ್ಲಿ ಗಾಂಜಾ ರೈಡ್ ಮಾಡಿ ನೂರಾರು ಕೆ.ಜಿಯನ್ನ ವಶಪಡಿಕೊಳ್ಳಲಾಗಿದೆ.ಇದು ಬೇರೆ ಬೇರೆ ರಾಜ್ಯಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಸ್ಲಂ ಮತ್ತು ಕಾಲೇಜಿಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ನಮ್ಮ ಗಮನಕ್ಕೆ ಬಂದಿರುವುದನ್ನ ತಕ್ಷಣ ಕ್ರಮಕೈಗೊಂಡಿದ್ದೇವೆ ಎಂದರು.
ಅದೇ ರೀತಿ ಬೈಕ್ ವ್ಹೀಲಿಂಗ್ ಮಾಡುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲು ಈಗಾಗಲೇ ಹೇಳಲಾಗಿದೆ.ವ್ಹೀಲಿಂಗ್ ಮಾಡುವವರ ಮೇಲೆ ಮತ್ತು ಬೈಕ್ ಮಾಲಿಕರರು ಬೈಕ್ ಅಲ್ಟರ್ ಮಾಡುವ ಮೆಕಾನಿಕ್ ಅಂಗಡಿ ಮಾಲೀಕರ ವಿರುದ್ಧವು ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತೆ .ಅಪಘಾತಗಳು ಆದರೆ ಪೋಷಕರೆ ಜವಬ್ದಾರಿ ಆಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.