ಬೆಂಗಳೂರು: ಸಿಲಿಕಾನ್ ಸಿಟಿಯ ಉತ್ತರ ವಿಭಾಗ ರಾಜಾಜಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ, ರಾತ್ರಿ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದು, 6 ಲಕ್ಷ ರೂ. ಮೌಲ್ಯದ 142 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀನಿವಾಸ್ ಅಲಿಯಾಸ್ ಡೊಳ್ಳ ಬಂಧಿತ ಆರೋಪಿಯಾಗಿದ್ದಾನೆ.
ತನ್ನ 17ನೇ ವಯಸ್ಸಿನಲ್ಲೇ ಕಳ್ಳತನ ಮಾಡುವುದನ್ನು ರೂಢಿಸಿಕೊಂಡಿದ್ದ ಆರೋಪಿ ಈ ಹಿಂದೆ ಜೈಲು ಸೇರಿ ವಾಪಸ್ ಆಗಿದ್ದ. ರಾತ್ರಿ ವೇಳೆ ಮನೆಗಳ ಮುಖ್ಯದ್ವಾರದ ಬೀಗ ಒಡೆದು ಕಳ್ಳತನ ಮಾಡುವುದೇ ಈತನ ಕಸುಬಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಪೀಣ್ಯ, ರಾಜಗೋಪಾಲನಗರ, ಆರ್ ಎಂ ಸಿ ಯಾರ್ಡ್, ನಂದಿನಿ ಲೇಔಟ್, ತುಮಕೂರು, ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿದ್ದು, ಸದ್ಯ ಖದೀಮನನ್ನು ಜೈಲಿಗಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ತನಿಖೆ ಮುಂದುವರೆಸಿದ್ದಾರೆ.