ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಾಗ್ತಿದ್ದ ಹಾಗೆ ಸಿಲಿಕಾನ್ ಸಿಟಿಯಲ್ಲಿ ಕ್ರೈಂ ಚಟುವಟಿಕೆಗಳು ಕೂಡ ಗರಿಗೆದರುತ್ತಿವೆ. ನಿನ್ನೆ ತಡರಾತ್ರಿ ರೌಡಿ ಗ್ಯಾಂಗ್ ದರೋಡೆಗೆ ಸಜ್ಜಾಗಿರುವ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಶಿಕುಮಾರ, ಶ್ರೀಕಾಂತ, ಎಂ ಮಣಿ, ಸಿದ್ದಾರ್ಥ ಬಂಧಿತ ಆರೋಪಿಗಳು. ಈ ಆರೋಪಿಗಳು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಎ 04 ಎಂಜಿ 6623 ನಂಬರ್ ರೆಡ್ ಕಲರ್ ಕಾರಿನಲ್ಲಿ ಕುಳಿತು ರಸ್ತೆಗಳಲ್ಲಿ ಓಡಾಡುವವರನ್ನ ಟಾರ್ಗೆಟ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಬೆಲೆಬಾಳುವ ವಸ್ತು, ಚಿನ್ನಾಭರಣ ದೋಚಲು ಪ್ಲಾನ್ ಮಾಡಿದ್ರು. ಈ ಮಾಹಿತಿ ಆಧಾರದ ಮೇರೆಗೆ ದಾಳಿ ನಡೆಸಿದ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನ ಬಂಧಿಸಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಪೈಕಿ ಶಶಿಕುಮಾರ್ ಮೇಲೆ ನಗರದ ಹಲವಾರು ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣಗಳು ದಾಖಲಾಗಿದೆ. ಹಾಗೇ ಶ್ರೀಕಾಂತ ಮೇಲೆ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಎಂ ಮಣಿ ಮೇಲೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ ಪ್ರಕರಣ, ಬಾಣಸವಾಡಿ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಸಿದ್ದಾರ್ಥ ಮೇಲೆ ಕೂಡ ಕೆಲ ಠಾಣೆಗಳಲ್ಲಿ ಅಪರಾಧ ಪ್ರಕರಣಗಳಿವೆ.
ಸದ್ಯ ಆರೋಪಿಗಳಿಂದ 3 ಮಚ್ಚು, ಒಂದು ಖಾರದಪುಡಿ ಪಾಕೆಟ್ ವಶಪಡಿಸಿಕೊಂಡಿರುವ ಪೊಲೀಸರು, ಕೊಲೆ, ಕೊಲೆಯತ್ನ, ದರೋಡೆ ಪ್ರಕರಣವನ್ನ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.