ಮಾರತಹಳ್ಳಿ(ಬೆಂಗಳೂರು) : ಆಂಧ್ರ ಪ್ರದೇಶದ ವೈಜಾಕ್ನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಮೂಲಕ ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಾರತಹಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಸುಮಾರು 40 ಕೆ.ಜಿ ಯ 4 ಲಕ್ಷ ಮೌಲ್ಯದ ಗಾಂಜಾ ಹಾಗು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಜಯ್, ರಾಜು, ರವಿ ಬಂಧಿತ ಆರೋಪಿಗಳಾಗಿದ್ದು, ಆಂಧ್ರಪ್ರದೇಶದ ವೈಜಾಕ್ನಿಂದ ತನ್ನ ಸಹಚರರಾದ ರಾಜೇಶ್, ಸೂರಿ, ಶಂಕರ್ ಅವರಿಂದ ಗಾಂಜಾ ಪಡೆದು ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ಬರುವಾಗ ಪೊಲೀಸರ ಕಣ್ತಪ್ಪಿಸಲು ದಂಧೆಕೋರರು ಮಾಸ್ಟರ್ ಪ್ಲಾನ್ ಮಾಡಿದ್ದರು. ಮಾರ್ಗಮಧ್ಯೆ ಮೂರ್ನಾಲ್ಕು ಕಡೆ ವಾಹನ ಬದಲಿಸಿ ಮಹದೇವಪುರದ ಪಣತ್ತೂರು ರೈಲ್ವೆ ಬ್ರಿಡ್ಜ್ ಬಳಿ ಬರುತ್ತಿದ್ದಾಗ ಮಾರತ್ತಹಳ್ಳಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ರಂಗೇಶ್ ಅವರು ದಾಳಿ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಒಡಿಶಾದಿಂದ ವಿಶಾಖಪಟ್ಟಣಕ್ಕೆ ಒಂದು ವಾಹನ, ಅಲ್ಲಿಂದ ಬೆಂಗಳೂರಿಗೆ ಮತ್ತೊಂದು ವಾಹನದಲ್ಲಿ ಗಾಂಜಾ ತಂದು ಮಾರಾಟ ಮಾಡಿದ್ದಾರೆ. ಒಮ್ಮೆಲೇ ನೂರಾರು ಕೆ. ಜಿ ಗಾಂಜಾವನ್ನು ನಗರಕ್ಕೆ ತರುತ್ತಿದ್ದ ಆರೋಪಿಗಳು ಸೂರ್ಯ ಹೆಸರಿನಲ್ಲಿ ಕೋಡ್ ವರ್ಡ್ ಇಟ್ಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದುಬಂದಿದೆ.
ಕೋಡ್ ವರ್ಡ್ ಹೇಳಿದವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆಸಾಮಿಗಳು ಬೆಂಗಳೂರಿನಲ್ಲಿ ಸಾಕಷ್ಟು ಕಡೆ ನೆಟ್ವರ್ಕ್ ಹೊಂದಿದ್ದರು. ಸದ್ಯ ಮೂವರನ್ನ ಬಂಧಿಸಿ ಪ್ರಮುಖ ಆರೋಪಿ ಬಂಧನಕ್ಕೆ ಮಾರತ್ತಹಳ್ಳಿ ಪೊಲೀಸರು ಬಲೆ ಬೀಸಿದ್ದಾರೆ.
ಓದಿ: ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ