ಬೆಂಗಳೂರು: ನಗರದ ಹಲವೆಡೆ ಮನೆಗಳ್ಳತನ ನಡೆಸಿ ತಲೆಮರೆಸಿಕೊಂಡಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಚಿನ್ನ-ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಅಂತರ್ ರಾಜ್ಯ ಮನೆಗಳ್ಳತನ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು. ನೋಯ್ಡಾ ಮೂಲದ ಖುರ್ಷದ್ ಖಾನ್ ಬಂಧಿತ ಅರೋಪಿಯಾಗಿದ್ದು, ಬಂಧಿತನಿಂದ ಒಂದು ಪಿಸ್ತೂಲ್ 5 ಜೀವಂತ ಗುಂಡು ವಶಕ್ಕೆ ಪಡೆದಿದ್ದೇವೆ, ಒಟ್ಟು 61 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದರು.
ನಾನಾ ಪೊಲೀಸ್ ಠಾಣೆಯಲ್ಲಿ 15 ಪ್ರಕರಣಗಳು ಬೆಳಕಿಗೆ ಬಂದಿವೆ, ನಗರದಲ್ಲಿ ಒಟ್ಟು 15 ಮನೆ ಕಳ್ಳತನ ಮಾಡಿದ್ದ ಎಂದು ತಿಳಿಸಿದರು. ಈ ಹಿಂದೆ ಹರಿಯಾಣದಲ್ಲಿ ಆರ್ಮ್ಸ್ ಆಯ್ಟ್ ಅಡಿ ಅರೆಸ್ಟ್ ಆಗಿದ್ದ ಆರೋಪಿ, ನಂತರ ಬೆಂಗಳೂರು ಕಡೆಗೆ ಬಂದು ಕಳ್ಳತನ ಮಾಡುತ್ತಿದ್ದ, 2013ರಿಂದ ಕರ್ನಾಟಕದಲ್ಲಿ ಕಳ್ಳತನ ಮಾಡಿರುವ ಮಾಹಿತಿ ದೊರೆತಿದೆ ಎಂದರು.
ಜೀವನ್ ಭೀಮಾನಗರ, ಬ್ಯಾಡರಹಳ್ಳಿ, ಹನುಮಂತ ನಗರ ಸೇರಿ ನಗರದ ಹಲವು ಕಡೆ ಕಳ್ಳತನ ಮಾಡಿದ್ದು, ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಬಂಗಾರವನ್ನು ಮಾರಾಟ ಮಾಡಿದ್ದ ಎಂದರು. ಕಂಟ್ರಿಮೇಡ್ ಪಿಸ್ತೂಲ್ ಸದಾ ಇಟ್ಟುಕೊಂಡು ತಿರುಗುತ್ತಿದ್ದ ಆರೋಪಿ, ಕಳ್ಳತನ ಮಾಡುವ ಸಮಯದಲ್ಲಿ ಯಾರಾದರೂ ತಡೆಯಲು ಮುಂದಾದರೆ ಹೆದರಿಸಲು ಪಿಸ್ತೂಲ್ ಇಟ್ಟುಕೊಂಡಿದ್ದ. ಈತನನ್ನು ಬಂಧಿಸಿ ಭಾಗಿಯಾಗಿರುವ ಇತರ ಆರೋಪಿಗಳಿಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದರು.
ಸಿಸಿಬಿಯಿಂದ ಕಳೆದ ಒಂದು ತಿಂಗಳಲ್ಲಿ ದಾಖಲೆ ಪ್ರಮಾಣದ ಪ್ರಕರಣಗಳು ಪತ್ತೆಮಾಡಲಾಗಿದೆ. 45 ಪ್ರಕರಣಗಳನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 13 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳ ಅಂದರ್!