ಬೆಂಗಳೂರು: ಕೊರೊನಾ ಅಟ್ಟಹಾಸವನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆವರೆಗೆ ಈ ಕರ್ಫ್ಯೂ ಇರಲಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದ್ದು, ರಾತ್ರಿ 9 ಗಂಟೆಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. 9 ಗಂಟೆ ಹೊತ್ತಿಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆರಂಭಿಸಿದ್ರೆ ಹತ್ತು ಗಂಟೆಯಷ್ಟರಲ್ಲಿ ಮನೆಗೆ ಹೋಗೋದಕ್ಕೆ ಅಗುತ್ತೆ. ಹೀಗಾಗಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದಕ್ಕೆ ಸೂಚನೆ ನೀಡಲಾಗಿದೆ. ರಾತ್ರಿ 10ರ ನಂತರ ಯಾವುದೇ ಕಾರಣಕ್ಕೂ ಹೊರಗೆ ಬರುವಂತಿಲ್ಲ. ಆಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಪಾಸ್ ಸರ್ವೀಸ್ ಯಾರಿಗೂ ಇಲ್ಲ. ಯಾರು ಕೂಡ ಅನವಶ್ಯಕವಾಗಿ ಓಡಾಟ ನಡೆಸುವಂತಿಲ್ಲ ಎಂದರು.
ಒಂದು ವೇಳೆ ಯಾರಾದರೂ ಅನಗತ್ಯವಾಗಿ ಓಡಾಡುವುದು ಕಂಡು ಬಂದಲ್ಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಾಗಿ ಯಾರೂ ಕೂಡ ಬೇಕಾಬಿಟ್ಟಿಯಾಗಿ ಓಡಾಡಬಾರದು. ನಮ್ಮ ಪೊಲೀಸರು ಬಂದೋಬಸ್ತ್ಗೆ ಸಿದ್ಧರಾಗಿದ್ದಾರೆ. ನಗರದ ಎಲ್ಲಾ ಫ್ಲೈ ಓವರ್ಗಳನ್ನು ಮುಚ್ಚಲಾಗುತ್ತದೆ. ತರಕಾರಿ, ಹಾಲು, ಪೇಪರ್, ತುರ್ತು ಸೇವೆ ವಾಹನಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಅಗತ್ಯ ಸೇವೆಗಳಿಗೆ ಅನುಮತಿ ನೀಡಲಾಗಿದೆ ಎಂದರು.
ನಂತರ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಮಾತನಾಡಿ, ಇಂದಿನಿಂದ ರಾತ್ರಿ ಕರ್ಫ್ಯೂ ಜಾರಿಯಾದ ಹಿನ್ನೆಲೆ ಮತ್ತು ಪೊಲೀಸ್ ಕಮಿಷನರ್ ಆದೇಶದ ಹಿನ್ನೆಲೆ ಬೆಂಗಳೂರಿನ ಫ್ಲೈ ಓವರ್ಗಳನ್ನು ಬಂದ್ ಮಾಡಲಿದ್ದೇವೆ. ರಾತ್ರಿ 9.50ಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿ ಫ್ಲೈ ಓವರ್ಗಳನ್ನ ಬಂದ್ ಮಾಡುತ್ತಾರೆ. ರಿಯಾಯಿತಿ ಇರುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತೆ.
ಇದನ್ನೂ ಓದಿ: ಇಂದಿನಿಂದ ನೈಟ್ ಕರ್ಫ್ಯೂ ಜಾರಿ : ಎಲ್ಲೆಲ್ಲಿ ನಾಕಾ ಬಂದಿ?
ದ್ವಿಮುಖ ರಸ್ತೆಯಲ್ಲಿ ಒಂದು ಮಾರ್ಗ ಬಂದ್ ಮಾಡಲಾಗುವುದು. ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಲಾಗುವುದು. ವಿಡಿಯೋ ವಾಲ್ ಸಹ ಕೆಲಸ ಮಾಡುತ್ತಿರುತ್ತದೆ. ಪೊಲೀಸರ ಕಣ್ತಪ್ಪಿಸಿ ರಾತ್ರಿ ವಾಹನ ಸಂಚಾರ ಮಾಡಿದ್ರೆ ಅದರ ಮೇಲೂ ಕಣ್ಣಿಡಲಾಗುವುದು. ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋಗಳನ್ನು ಆಧರಿಸಿ ಸಂಚರಿಸಿದ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.