ಬೆಂಗಳೂರು: ಮೆಜೆಸ್ಟಿಕ್ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರು-ಮೈಸೂರು-ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ವಿಶೇಷ ರೈಲು ಹಾಗೂ ಭಾರತ್ ಗೌರವ್ ಕಾಶಿ ದರ್ಶನ ವಿಶೇಷ ರೈಲಿಗೆ ಚಾಲನೆ ನೀಡಿದರು.
ಬೆಳಗ್ಗೆ 10.25ಕ್ಕೆ ಮೆಜೆಸ್ಟಿಕ್ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ವಂದೇ ಭಾರತ್ ವಿಶೇಷ ರೈಲಿಗೆ ಹಸಿರು ನಿಶಾನೆ ತೋರಿದರು. ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ತಾವರ್ ಚಂದ್ ಗೆಹ್ಲೋತ್, ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಪ್ರಹ್ಲಾದ್ ಜೋಷಿ ಉಪಸ್ಥಿತರಿದ್ದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಜೆ 5.20ಕ್ಕೆ ಎಂಜಿಆರ್ ಚೆನ್ನೈ ಸೆಂಟ್ರಲ್ ಸ್ಟೇಷನ್ ತಲುಪಲಿದೆ. 16 ಕೋಚ್ಗಳ ವಂದೇ ಭಾರತ್ ರೈಲು ಬೆಂಗಳೂರು ಕಂಟೋನ್ಮೆಂಟ್, ಬೈಯ್ಯಪ್ಪನ ಹಳ್ಳಿ, ಕೆ.ಆರ್.ಪುರಂ, ವೈಟ್ ಫೀಲ್ಡ್, ದೇವನಗೊಂದಿ, ಮಾಲೂರು, ತ್ಯಾಕಲ್, ಬಂಗಾರಪೇಟೆ, ವರದಪುರ, ಬಿಸನತ್ತಂ, ಕುಪ್ಪಂ, ಮುಲನೂರ್, ಸೋಮನಾಯಕ್ಕನ್ ಪಟ್ಟಿ, ಜೋಲಾರ್ ಪೇಟ್ ಜಂಕ್ಷನ್ ಸೇರಿದಂತೆ 40 ರೈಲು ನಿಲ್ದಾಣಗಳಲ್ಲಿ ಸ್ಟಾಪ್ ತೆಗೆದುಕೊಳ್ಳಲಿದೆ.
ವಂದೇ ಭಾರತ್ ಮೈಸೂರು-ಚೆನ್ನೈ ಟಿಕೆಟ್ ದರ ಎಸಿ ಚೇರ್ ಕಾರ್ (CC) ದರ 1,200 ರೂ. ಇದ್ದು, ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ (EC) ದರ 2,295 ರೂ. ಇರಲಿದೆ. ಇನ್ನು ಚೆನ್ನೈ-ಮೈಸೂರು ವಂದೇ ಭಾರತ್ ರೈಲಿನ ಟಿಕೆಟ್ ದರ ಎಸಿ ಚೇರ್ ಕಾರ್ (CC) ದರ 1,365 ರೂ., ಎಕ್ಸಿಕ್ಯೂಟಿವ್ ಎಸಿ ಚೇರ್ ಕಾರ್ (EC) ದರ 2,485 ರೂ. ಇರಲಿದೆ.
ವಂದೇ ಭಾರತ್ ರೈಲಿನ ವಿಶೇಷತೆ ಏನು?: ಸ್ವದೇಶಿ ನಿರ್ಮಿತ ಅತಿ ವೇಗದ ಸುಸಜ್ಜಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ದಕ್ಷಿಣ ಭಾರತದ ಮೊದಲ, ದೇಶದ 5ನೇ ವಂದೇಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು.
ದೇಶದ ಅತಿ ವೇಗದ ರೈಲು ಇದಾಗಿದ್ದು, ಗಂಟೆಗೆ ಗರಿಷ್ಠ 160 ಕಿ.ಮೀ. ವೇಗದದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಐಶಾರಾಮಿ ವ್ಯವಸ್ಥೆ, ಸೀಟುಗಳನ್ನು ವಿಮಾನದ ರೀತಿ ನಿರ್ಮಿಸಲಾಗಿದ್ದು, ಇದು ವಿಶ್ವದರ್ಜೆಯ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿದೆ. ಹವಾನಿಯಂತ್ರಿತ, ಎಕಾನಮಿ ಮತ್ತು ಪ್ರೀಮಿಯಂ ಕ್ಲಾಸ್‌ಗಳನ್ನು ಈ ರೈಲು ಹೊಂದಿದೆ.
ವಂದೇ ಭಾರತ್ ರೈಲಿನಲ್ಲಿ ಆನ್‌ಬೋರ್ಡ್ ಉಪಾಹಾರದ ವ್ಯವಸ್ಥೆ ಇದೆ, ವೈಫೈ, ಮಾಹಿತಿ ವ್ಯವಸ್ಥೆ, ಚಾರ್ಜಿಂಗ್ ಪಾಯಿಂಟ್, ರೀಡಿಂಗ್ ಲೈಟ್ ವ್ಯವಸ್ಥೆ, ಸ್ವಯಂ ಚಾಲಿತ ಬಾಗಿಲು, ಸಿಸಿ ಟಿವಿ, ಬಯೋ ಶೌಚಾಲಯ ವ್ಯವಸ್ಥೆ ಇದೆ.
ವಂದೇ ಭಾರತ್ 16 ಬೋಗಿಗಳನ್ನು ಹೊಂದಿದ್ದು, 384 ಮೀ. ಉದ್ದ, ಪ್ರತ್ಯೇಕ ಎಂಜಿನ್ ಇಲ್ಲ. ಪ್ರತಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ 1,128 ಪ್ರಯಾಣಿಕರ ಸೀಟಿನ ಸಾಮರ್ಥ್ಯ ಹೊಂದಿದೆ. ಮೈಸೂರು ಮತ್ತು ಚೆನ್ನೈ ನಡುವಿನ 504 ಕಿ.ಮೀ. ದೂರವನ್ನು ಈ ರೈಲು 7 ತಾಸುಗಳಲ್ಲಿ ಕ್ರಮಿಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಗರಿಷ್ಠ ವೇಗ 160 ಕಿ.ಮೀ. ಇದೆಯಾದರೂ, ಮೈಸೂರು ಮತ್ತು ಚೆನ್ನೈ ನಡುವೆ ಗಂಟೆಗೆ ಗರಿಷ್ಠ 75 ಕಿ.ಮೀ ವೇಗದಲ್ಲಿ ಸಂಚರಿಸಲಿದೆ.
ಭಾರತ್ ಗೌರವ್ ಕಾಶಿ ದರ್ಶನ ರೈಲಿನ ವಿಶೇಷತೆ ಏನು?: ಈ ರೈಲಿನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ 3 ಟಯರ್ ಎಸಿ ವ್ಯವಸ್ಥೆ ಮಾಡಲಾಗಿದ್ದು, 14 ಬೋಗಿಗಳು ಇರಲಿದೆ. ಎಲ್ಲಾ ಬೋಗಿಗಳ ಮೇಲೂ ರಾಜ್ಯದ 28 ದೇವಸ್ಥಾನಗಳ ಛಾಯಾಚಿತ್ರಗಳ ಬ್ರಾಂಡಿಂಗ್ ಮಾಡಲಾಗಿದೆ. ನಮ್ಮ ರಾಜ್ಯದ ದೇವಸ್ಥಾನಗಳನ್ನು ಭಾರತದ ಉದ್ದಗಲಕ್ಕೂ ಸಂಚರಿಸಲಿರುವ ಟ್ರೈನ್ ಮೂಲಕ ಪ್ರಚಾರ ಮಾಡುವುದು ಇದರ ಉದ್ದೇಶ.
ಈಗಾಗಲೇ ಐಆರ್‌ಸಿಟಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಊಟ, ಉಪಹಾರ, ಯಾತ್ರಾ ಸ್ಥಳದಲ್ಲಿ ತಂಗುವ ವ್ಯವಸ್ಥೆ ಹಾಗೂ ಯಾತ್ರಾ ಸ್ಥಳಗಳಿಗೆ ಪ್ರಯಾಣಿಸಲು ಸ್ಥಳೀಯ ಸಾರಿಗೆ ವ್ಯವಸ್ಥೆ ಮತ್ತು ತುರ್ತು ವೈದ್ಯಕೀಯ ಸೇವಾ ವ್ಯವಸ್ಥೆಗಳನ್ನು ಏರ್ಪಡಿಸಲಾಗಿದೆ.
5 ಸಾವಿರ ರೂ. ಸಹಾಯಧನ: ಐಆರ್‌ಸಿಟಿಸಿ ಸಹಭಾಗಿತ್ವದ ಈ ಟೂರ್ ಪ್ಯಾಕೇಜ್ ತಗೆದುಕೊಳ್ಳುವ ಪ್ರತಿ ವ್ಯಕ್ತಿಗೂ 5 ಸಾವಿರ ರೂಪಾಯಿಗಳ ಸಹಾಯಧನವನ್ನು ಕರ್ನಾಟಕ ಸರ್ಕಾರ ನೀಡಲಿದೆ. ಈ ಪ್ಯಾಕೇಜ್ನ ದರ ಮೂಲತಃ 20 ಸಾವಿರ ರೂಪಾಯಿಗಳಾಗಿದ್ದು, ಪ್ರಯಾಣಿಕರು ಕೇವಲ 15,000 ರೂಪಾಯಿಗಳನ್ನು ನೀಡಿದರೆ ಸಾಕು. ಉಳಿದ 5000 ರೂ.ಗಳನ್ನು ಕರ್ನಾಟಕ ಸರ್ಕಾರ ಸಹಾಯಧನದ ರೂಪದಲ್ಲಿ ನೀಡಲಿದೆ.
ಉತ್ತರ ಕರ್ನಾಟಕದಲ್ಲೂ ರೈಲು ಹತ್ತುವ ಅವಕಾಶ: ಬೆಂಗಳೂರಿನಿಂದ ಹೊರಡುವ ಕಾಶಿ ದರ್ಶನ ರೈಲನ್ನು ಹತ್ತಲು ಉತ್ತರ ಕರ್ನಾಟಕದ ಪ್ರಮುಖ ನಿಲ್ದಾಣಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ರೈಲು ಬೆಂಗಳೂರು, ಬಿರೂರ್, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ಮಾರ್ಗವಾಗಿ ಕಾಶಿ, ಅಯೋಧ್ಯೆ ಮತ್ತು ಪ್ರಯಾಗರಾಜ್ಗೆ ಸಂಚರಿಸಲಿದೆ.
ಅತ್ಯಂತ ಕಡಿಮೆ ವೆಚ್ಚದಲ್ಲಿ ಕಾಶಿ ವಿಶ್ವನಾಥ ಹಾಗೂ ಅಯೋಧ್ಯೆ ರಾಮನ ವೈಭವ ನೋಡುವ ಅವಕಾಶ ಇದಾಗಿದೆ. 8 ದಿನದ ಈ ಟೂರ್ ಪ್ಯಾಕೇಜ್‌ನಲ್ಲಿ ಎಲ್ಲಾ ಸವಲತ್ತುಗಳು ಒಳಗೊಂಡಿರಲಿದೆ. ಟ್ರೈನ್ ದರ, ಪ್ರವಾಸಿ ಸ್ಥಳಗಳಲ್ಲಿ ಅಗತ್ಯವಿರುವ ಬಸ್ ವ್ಯವಸ್ಥೆ, ಉಳಿದುಕೊಳ್ಳಲು ಹೋಟೆಲ್ ಮತ್ತು 8 ದಿನಗಳಲ್ಲಿ ಊಟ ಮತ್ತು ತಿಂಡಿ ವ್ಯವಸ್ಥೆ ಹಾಗೂ ವಿಮೆಯನ್ನು ಸಹ ಈ ರೈಲು ಟೂರ್ ಪ್ಯಾಕೇಜ್ ಒಳಗೊಂಡಿರಲಿದೆ.
ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ: ರಾಜ್ಯಪಾಲ, ಸಿಎಂರಿಂದ ಸ್ವಾಗತ