ಬೆಂಗಳೂರು: ಚಂದ್ರಯಾನ 3 ಸಾಫ್ಟ್ ಲ್ಯಾಂಡಿಂಗ್ ಸಫಲವಾದ ಹಿನ್ನೆಲೆ ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಯಾವುದೇ ರೋಡ್ ಶೋ ನಡೆಸದೇ, ಪಕ್ಷದ ಬಾವುಟ ಪ್ರದರ್ಶಿಸದೇ ಕೇವಲ ಇಸ್ರೋ ವಿಜ್ಞಾನಿಗಳ ಭೇಟಿಗೆ ಸೀಮಿತಗೊಳಿಸಿ ಪ್ರಧಾನಿ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ನಾಳೆ ಬೆಳಗ್ಗೆ 6 ಗಂಟೆಗೆ ನಗರದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ಮೋದಿ ಅವರಿಗೆ ಏರ್ಪೋರ್ಟ್ನಲ್ಲಿ ಸ್ವಾಗತ ಕೋರುವ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಮೋದಿಯವರು ಮಾತನಾಡಬಹುದು. ಅದಕ್ಕಾಗಿ ಅರ್ಧ ಗಂಟೆ ಸಮಯ ಕಾಯ್ದಿರಿಸಲಾಗಿದೆ. ಆದರೆ ಮೋದಿ ಭಾಷಣ ಮಾಡುವ ಕುರಿತ ನಿರ್ಧಾರ ಇನ್ನೂ ಅಂತಿಮವಾಗಿಲ್ಲ. ಪೀಣ್ಯದಲ್ಲಿ 1. ಕಿ.ಮೀ. ರೋಡ್ ಶೋ ಮಾಡಲು ಸಿದ್ಧತೆ ಮಾಡಲಾಗಿತ್ತಾದರೂ ಎಸ್ಪಿಜಿ ಅನುಮತಿ ನೀಡದ ಹಿನ್ನೆಲೆ ರೋಡ್ ಶೋ ನಿರ್ಧಾರ ಕೈಬಿಡಲಾಗಿದೆ. ತೆರೆದ ವಾಹನದ ಬದಲು ಅಧಿಕೃತ ಕಾರಿನಲ್ಲಿಯೇ ಕಾನ್ವಾಯ್ ಮೂಲಕ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಲೇ ಕಾರಿನೊಳಗಿನಿಂದ ಪ್ರಧಾನಿ ಕಾರ್ಯಕರ್ತರತ್ತ ಕೈ ಬೀಸಲಿದ್ದಾರೆ.
ಮೋದಿ ಸ್ವಾಗತದ ವೇಳೆ ಎಲ್ಲರೂ ರಾಷ್ಟ್ರಧ್ವಜ ಹಿಡಿದುಕೊಳ್ಳಲು, ಪ್ರಧಾನಿ ಮತ್ತು ಇಸ್ರೋ ವಿಜ್ಞಾನಿಗಳಿಗೆ ಮಾತ್ರ ಘೋಷಣೆ ಹಾಕಲು ಕಾರ್ಯಕರ್ತರಿಗೆ ಸೂಚಿಸಲಾಗಿದೆ, ಇಲ್ಲಿ ಬಿಜೆಪಿ ಪರ ಘೋಷಣೆ ಹಾಕದಂತೆ ಹಾಗೂ ಬಿಜೆಪಿ ಧ್ವಜ ಪ್ರದರ್ಶಿಸದಂತೆ ನಿರ್ದೇಶನ ನೀಡಿದ್ದು, ಕೇವಲ ಇಸ್ರೋ ವಿಜ್ಞಾನಿಗಳಿಗೆ ಗೌರವ ಸಲ್ಲಿಸುವಂತೆ ನೋಡಿಕೊಳ್ಳಲು ಸೂಚಿಸಲಾಗಿದೆ.
ಸೂರ್ಯಯಾನ ಯೋಜನೆಯ ಬಗ್ಗೆ ಮಾತುಕತೆ: ಮೋದಿ ರಾಜ್ಯ ಪ್ರವಾಸದ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, "ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಆಫ್ರಿಕಾ ಮತ್ತು ಗ್ರೀಸ್ ಪ್ರವಾಸ ಮುಗಿಸಿ ನಾಳೆ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇಸ್ರೋದ ಎಲ್ಲಾ ವಿಜ್ಞಾನಿಗಳನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ. ಸೂರ್ಯಯಾನ ಯೋಜನೆಯ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸ್ವಾಗತ ಕಾರ್ಯಕ್ರಮಕ್ಕೆ ಸಿದ್ದತೆ ಆಗಿದೆ. ಇದನ್ನು ಹೊರತುಪಡಿಸಿ ರೋಡ್ ಶೋ ಬಗ್ಗೆ ಯಾವುದೇ ಯೋಜನೆ ಇನ್ನೂ ಸಿದ್ಧವಾಗಿಲ್ಲ. ವಿಮಾನ ನಿಲ್ದಾಣದಲ್ಲಿ ಬೆಂಗಳೂರಿನ ಕಾರ್ಯಕರ್ತರು ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ. ಅದಾದ ನಂತರ ಕೇವಲ ಇಸ್ರೋದ ಕಾರ್ಯಕ್ರಮ ಮಾತ್ರ ನಡೆಯಲಿದೆ" ಎಂದು ಮಾಹಿತಿ ನೀಡಿದ್ದಾರೆ.
ಈ ರಸ್ತೆಗಳಲ್ಲಿ ಸಂಚಾರ ಬದಲಾವಣೆ: ನಾಳೆ ಪ್ರಧಾನಿ ನರೇಂದ್ರ ಆಗಮನ ಈ ಹಿನ್ನೆಲೆ ನಗರದ ಕೆಲವೆಡೆ ಬೆಂಗಳೂರು ಸಂಚಾರಿ ಪೊಲೀಸರು ರಸ್ತೆ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದಾರೆ. ಆಗಸ್ಟ್ 26 ಬೆಳಗ್ಗಿನ ಜಾವ 4:30ರಿಂದ ಬೆಳಗ್ಗೆ 9:30ರ ವರೆಗೆ ಕೆಳಕಂಡ ರಸ್ತೆಗಳ ಮಾರ್ಗ ಬದಲಾವಣೆಯಾಗಲಿದೆ.
ಓಲ್ಡ್ ಏರ್ಪೋರ್ಟ್ ರಸ್ತೆ, ಓಲ್ಡ್ ಮದ್ರಾಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್), ಸಿ.ವಿ ರಾಮನ್ ರಸ್ತೆ, ಯಶವಂತಪುರ ಫ್ಲೈ ಓವರ್, ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ), ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್‌ನಿಂದ ಸುಮನಹಳ್ಳಿ) ಗುಬ್ಬಿ ತೋಟದಪ್ಪ ರಸ್ತೆ, ಜಾಲಹಳ್ಳಿ ಕ್ರಾಸ್ ರಸ್ತೆಗಳಿಗೆ ಬದಲಿಯಾಗಿ ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಕೋರಲಾಗಿದೆ.
ಇದೇ ಸಂದರ್ಭದಲ್ಲಿ ಬೆಳಗ್ಗೆ 11 ಗಂಟೆಯವರೆಗೂ ನಗರದೊಳಗೆ ಭಾರಿ ಸರಕು ಸಾಗಾಣಿಕೆ ವಾಹನಗಳಿಗೂ ನಿರ್ಬಂಧ ವಿಧಿಸಲಾಗಿದೆ. ಮುಂಜಾನೆ ಹೆಚ್ಎಎಲ್ ಏರ್ಪೋರ್ಟ್ಗೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿ ರಸ್ತೆ ಮಾರ್ಗವಾಗಿ ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಸಂಚಾರ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.
ಇದನ್ನೂ ಓದಿ: ಚಂದ್ರಯಾನ-3 ಸಕ್ಸಸ್: ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಶನಿವಾರ ಬೆಂಗಳೂರಿಗೆ ಮೋದಿ ಆಗಮನ!
ಮೋದಿ ವೇಳಾಪಟ್ಟಿ ಇಂತಿದೆ: ಆಗಸ್ಟ್ 26 ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ಗೆ ಆಗಮಿಸಲಿರುವ ಪ್ರಧಾನಿ ಮೋದಿ, 6.30ರವರೆಗೆ ಅಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ 6.35ಕ್ಕೆ ರಸ್ತೆ ಮಾರ್ಗದ ಮೂಲಕ ಹೊರಟು, 7 ಗಂಟೆಗೆ ಪೀಣ್ಯದಲ್ಲಿನ ಐ-ಸ್ಟ್ರಾಕ್ ಕೇಂದ್ರಕ್ಕೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 7 ಗಂಟೆಯಿಂದ 8ರವರೆಗೆ ಇಸ್ರೋ ವಿಜ್ಞಾನಿಗಳ ಜೊತೆ ಸಭೆ ನಡೆಸಲಿದ್ದಾರೆ. ಬಳಿಕ 8.05ಕ್ಕೆ ಅಲ್ಲಿಂದ ಹೊರಡಲಿರುವ ಪ್ರಧಾನಿ, 08.35ಕ್ಕೆ ಬೆಂಗಳೂರಿನ ಹೆಚ್ಎಎಲ್ನಿಂದ ದೆಹಲಿಗೆ ಹಿಂದಿರುಗಲಿದ್ದಾರೆ.
ಇದನ್ನೂ ಓದಿ: ಚಂದ್ರನ 'ದಕ್ಷಿಣ ಪಥೇಶ್ವರ' ಭಾರತ: ಯಾರೂ ಮುಟ್ಟದ ಜಾಗದಲ್ಲಿ 'ಇಸ್ರೋ' ಹೆಜ್ಜೆಗುರುತು!