ಬೆಂಗಳೂರು: ನಗರದ ಯಲಹಂಕ ತಾಲೂಕಿನ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೇ ನಂಬರ್ 79ರಲ್ಲಿನ 17 ಎಕರೆ ಭೂಮಿಗೆ ಸಂಬಂಧಿಸಿದಂತೆ ಐವರು ಖಾಸಗಿ ವ್ಯಕ್ತಿಗಳ ಕಂದಾಯ ದಾಖಲೆಗಳ ನೋಂದಣಿಯನ್ನು ರದ್ದುಪಡಿಸಲು ವಿಶೇಷ ಜಿಲ್ಲಾಧಿಕಾರಿಗಳು ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ವಿಶೇಷ ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಭಾಗ್ಯಮ್ಮ ಹಾಗೂ ಇತರೆ ಐವರು ವ್ಯಕ್ತಿಗಳು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ. ಎಂ. ಶ್ಯಾಮ್ ಪ್ರಸಾದ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಜರುಗಿಸಬಾರದು ಎಂದು ನಿರ್ದೇಶಿಸಿ ಸರ್ಕಾರ ಮತ್ತು ವಿಶೇಷ ಜಿಲ್ಲಾಧಿಕಾರಿಗೆ ಸೂಚಿಸಿ ಪೀಠ ವಿಚಾರಣೆಯನ್ನು ನವೆಂಬರ್ 17ಕ್ಕೆ ಮುಂದೂಡಿದೆ.
ಯಲಹಂಕ ತಾಲೂಕಿನ ಜಾಲ ಹೋಬಳಿಯ ಶೆಟ್ಟಿಗೆರೆ ಗ್ರಾಮದ ಸರ್ವೇ ನಂಬರ್ 79ರಲ್ಲಿನ 17 ಎಕರೆ ಜಮೀನಿಗೆ ಸಂಬಂಧಿಸಿದಂತೆ ಅರ್ಜಿದಾರರ ಹೆಸರಿನಲ್ಲಿರುವ ದಾಖಲೆಗಳು ನಕಲಿಯಾಗಿವೆ. ಹೀಗಾಗಿ, ಅವರ ಹೆಸರಿನಲ್ಲಿರುವ ಕಂದಾಯ ನೋಂದಣಿಗಳನ್ನು ರದ್ದುಪಡಿಸಬೇಕು ಎಂದು ಸ್ಥಳೀಯ ತಹಶೀಲ್ದಾರ್‌ಗೆ ನಿರ್ದೇಶಿಸಿ ಬೆಂಗಳೂರು ವಿಶೇಷ ಜಿಲ್ಲಾಧಿಕಾರಿ ಎಂ.ಕೆ. ಜಗದೀಶ್ ಅವರು 2020ರ ಸೆ.24ರಂದು ಆದೇಶಿಸಿದ್ದರು.
ಈ ಜಾಗದ ಮೌಲ್ಯ ಅಂದಾಜು 100 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ವಿಶೇಷ ಜಿಲ್ಲಾಧಿಕಾರಿಗಳು ಈ ಆದೇಶ ರದ್ದುಪಡಿಸಲು ಕೋರಿ ಭಾಗ್ಯಮ್ಮ ಹಾಗೂ ಇತರೆ ಐವರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.