ಬೆಂಗಳೂರು: ಡ್ರಗ್ಸ್ ಜಾಲ ನಂಟು ಪ್ರಕರಣವನ್ನು ತನಿಖೆ ನಡೆಸಲು ಸಿಸಿಬಿ ಜೊತೆ ಐಎಸ್ಡಿ ಕೂಡ ಕೈಜೋಡಿಸಿದ್ದು, ಈಗಾಗಲೇ ಕೆಲ ಕಿರುತೆರೆ ನಟ-ನಟಿಯರನ್ನು ವಿಚಾರಣೆ ನಡೆಸಿದೆ. ಆದರೆ, ಎರಡು ಸಂಸ್ಥೆಗಳು ಒಂದೇ ಪ್ರಕರಣದ ತನಿಖೆ ನಡೆಸುವುದರಿಂದ ತನಿಖೆಯ ದಾರಿ ತಪ್ಪುವ ಸಾಧ್ಯತೆಗಳಿದ್ದು, ಹೀಗಾಗಿ ಐಎಸ್ಡಿ ವಿಚಾರಣೆ ನಡೆಸುತ್ತಿರುವ ಪ್ರಕರಣಗಳನ್ನು ಸಿಸಿಬಿಗೆ ವರ್ಗಾಯಿಸುವ ಸಾಧ್ಯತೆಯಿದೆ.
ನಿನ್ನೆ ಐಎಸ್ಡಿ ಎಡಿಜಿಪಿ ಭಾಸ್ಕರ್ ರಾವ್ ಜೊತೆ, ಡಿಜಿ ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸಿದ್ದು, ಐಎಸ್ಡಿ ಬಂಧಿಸಿರುವ ಆರೋಪಿಗಳ ಮಾಹಿತಿಯನ್ನ ಸಿಸಿಬಿಗೆ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸೆಪ್ಟೆಂಬರ್ 21 ರಂದು ಕೇರಳದ ಮೂಲದ ಡ್ರಗ್ಸ್ ಪೆಡ್ಲರ್ಗಳಾದ ಡ್ಯಾನಿಯಲ್ ಮತ್ತು ಗೋಕುಲ್ ಕೃಷ್ಣ ಎಂಬ ಇಬ್ಬರನ್ನು ಐಎಸ್ಡಿ ಪೊಲೀಸರು ವಶಕ್ಕೆ ಪಡೆದು, ಕಾಲ್ ಡಿಟೈಲ್ಸ್ ಆಧಾರದ ಮೇರೆಗೆ 6 ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ಸದ್ಯ, ಎಂಟು ಮಂದಿಗೆ ನೋಟಿಸ್ ನೀಡಿದ್ದು, 6 ಮಂದಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮತ್ತೊಂದೆಡೆ ಇದೇ ಡ್ರಗ್ಸ್ ಪ್ರಕರಣದಲ್ಲಿ ಸಿಸಿಬಿ 13 ಜನರನ್ನು ಬಂಧಿಸಿದೆ. ಹೀಗಾಗಿ, ಡ್ರಗ್ಸ್ ಪ್ರಕರಣದ ತನಿಖೆಯಲ್ಲಿ ಅಧಿಕಾರಿಗಳ ಮಧ್ಯೆ ಗೊಂದಲ ಉಂಟಾಗಬಾರದು ಎಂಬ ನಿಟ್ಟಿನಲ್ಲಿ ಎಲ್ಲಾ ಪ್ರಕರಣಗಳನ್ನು ಸಿಸಿಬಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ.