ಬೆಂಗಳೂರು : ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರ ಕಾರ್ಯನಿರ್ವಹಣೆಗೆ ಸೂಕ್ತ "ಪ್ರಮಾಣಿತ ಕಾರ್ಯಾಚರಣಾ ವಿಧಾನ" (ಎಸ್‍ಒಪಿ)ಗಳನ್ನು ರೂಪಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಕಾರ್ಮಿಕ ಸಂಘಟನೆ ಎಐಟಿಯುಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಘೋಷಿಸಿದ ಬಳಿಕ ಸ್ಥಗಿತಗೊಂಡಿದ್ದ ಕೈಗಾರಿಕೆಗಳು ಮತ್ತು ಉದ್ದಿಮೆಗಳು ಹಂತಹಂತವಾಗಿ ಕಾರ್ಯಾರಂಭ ಮಾಡಿವೆ. ಇದೀಗ ಪೂರ್ಣ ಪ್ರಮಾಣದಲ್ಲಿ ಕೈಗಾರಿಕಾ ಚಟುವಟಿಕೆಗಳು ನಡೆಯುತ್ತಿವೆ. ಆದರೆ, ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಹಾಗಿದ್ದೂ ಕೈಗಾರಿಕೆ ಮತ್ತು ಉದ್ದಿಮೆಗಳಲ್ಲಿ ಕಾರ್ಮಿಕರ ಕಾರ್ಯನಿರ್ವಹಣೆಗೆ ನಿರ್ದಿಷ್ಟ ಎಸ್‍ಒಪಿ ಜಾರಿ ಮಾಡಿಲ್ಲ. ಇದರಿಂದಾಗಿ ಕಾರ್ಮಿಕರು ಸುರಕ್ಷತೆ ಇಲ್ಲದೆ ಅಪಾಯಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಎಸ್ಓಪಿ ರೂಪಿಸಲು ಸರ್ಕಾರ ಮುಂದಾಗಬೇಕು. ಹಾಗೆಯೇ ಕೊರೊನಾ ಸೋಂಕಿನಿಂದ ಕ್ವಾರಂಟೈನ್ಗೆ ಒಳಗಾಗುವ ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.