ಬೆಂಗಳೂರು: ಕೊರೊನಾ ಸೋಂಕಿತ ಹಿರಿಯ ನಾಗರಿಕರಿಗೆ ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ಆರೋಗ್ಯ ವಿಮೆ ಒದಗಿಸಲು ಸರ್ಕಾರಗಳಿಗೆ ನಿರ್ದೇಶಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ನಗರದ ಖಾಸಗಿ ಸಂಘ ಸಂಸ್ಥೆಯೊಂದು ಹಿರಿಯ ನಾಗರಿಕರಿಗೆ ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಆರೋಗ್ಯ ವಿಮೆ ನೀಡಬೇಕೆಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಮತ್ತು ನ್ಯಾಯಮೂರ್ತಿ ಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ವಿಮಾ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರಕ್ಕೆ(ಐಆರ್ಡಿಎ) ನೋಟಿಸ್ ಜಾರಿ ಮಾಡಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಆರ್ಥಿಕವಾಗಿ ಹಿಂದುಳಿದಿರುವ ಹಿರಿಯರಿಗೆ ಖಾಸಗಿ ಸಂಸ್ಥೆಗಳಿಂದ ಹೆಚ್ಚಿನ ಮೊತ್ತ ಪಾವತಿಸಿ ವಿಮೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಚಿಕಿತ್ಸೆ ಪಡೆಯದೆ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಕೆಲವು ಕಾಯಿಲೆಗಳಿಗೆ ವಿಮೆ ಅನ್ವಯವಾಗುವುದಿಲ್ಲ. ಇತ್ತೀಚೆಗೆ ಐಆರ್ಡಿಎ ಹೊರಡಿಸಿರುವ ಸುತ್ತೋಲೆಯಲ್ಲಿ ಕೊರೊನಾ ಚಿಕಿತ್ಸೆ ವಿಮೆಯಿಂದ ಹಿರಿಯ ನಾಗರಿಕರನ್ನು ಹೊರಗಿಟ್ಟಿದೆ.
ಆದ್ದರಿಂದ ದೇಶದಲ್ಲಿರುವ ಶೇಕಡ 8 ರಷ್ಟು ಹಿರಿಯ ನಾಗರಿಕರ ರಕ್ಷಣೆ ದೃಷ್ಟಿಯಿಂದ ರಿಯಾಯಿತಿ ದರ ಇಲ್ಲವೇ ಉಚಿತವಾಗಿ ವಿಮೆ ನೀಡುವಂತೆ ಸರ್ಕಾರಗಳಿಗೆ ನಿರ್ದೇಶಿಸಬೇಕು ಎಂದು ವಕೀಲರು ಕೋರಿದರು.