ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ಪರೀಕ್ಷೆಗಳು ನಡೆಯುತ್ತಿದ್ದು, ಬೆಳಗ್ಗೆ 8:30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕರ್ಫ್ಯೂ ವಿಧಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಸಲಾಗಿದೆ.
ಕರಣ್ ಕುಮಾರ್ ಎಂಬುವರು ಪರೀಕ್ಷಾ ಸಮಯದಲ್ಲಿ ಕರ್ಫ್ಯೂ ವಿಧಿಸಲು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ದಿಲ್ ರಾಜ್ ವಾದಿಸಿ, ರಾಜ್ಯದಲ್ಲಿ ಜೂನ್. 25 ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಆರಂಭಿಸಲಾಗಿದೆ. ಕೊರೊನಾ ಸೋಂಕು ವ್ಯಾಪಿಸುತ್ತಿರುವ ಸಮಯದಲ್ಲಿ ಪರೀಕ್ಷೆ ನಡೆಸುತ್ತಿರುವುದರಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಪೋಷಕರಿಗೆ ವೈರಸ್ ತಗಲುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣ ಮಾಡುವುದರಿಂದ ಮತ್ತು ಒಂದೇ ಜಾಗದಲ್ಲಿ ಸೇರುವುದರಿಂದ ಕೊರೊನಾ ಸೋಂಕು ತಗಲುವ ಸಾಧ್ಯತೆಯಿದೆ. ಹೀಗಾಗಿ, ಪರೀಕ್ಷೆ ನಿಗದಿಯಾಗಿರುವ ದಿನಗಳಂದು ಬೆಳಗ್ಗೆ 8:30 ರಿಂದ 2 ಗಂಟೆಯವರೆಗೆ ಕರ್ಪ್ಯೂ ವಿಧಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಈ ಹಿಂದೆ ಹತ್ತನೇ ತರಗತಿ ಪರೀಕ್ಷೆ ನಡೆಸದಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸಂದರ್ಭದಲ್ಲೇ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗಿದೆ. ಹೀಗಾಗಿ ಕರ್ಫ್ಯೂ ವಿಧಿಸುವ ಕುರಿತು ತುರ್ತಾಗಿ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜತೆಗೆ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು, ಪೋಷಕರು ಗುಂಪು ಸೇರದಂತೆ ನೋಡಿಕೊಳ್ಳುವಂತೆ ಸರ್ಕಾರ ಮತ್ತು ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.