ಬೆಂಗಳೂರು: ಸಮಗ್ರ ಸಾರಿಗೆ ಯೋಜನೆ ಮತ್ತು ಏಕೀಕೃತ ಸಂಚಾರ ದಟ್ಟಣೆ ವ್ಯವಸ್ಥೆ ನಿಯಮಗಳನ್ನು ಪಾಲಿಸದ ಆರೋಪದ ಮೇಲೆ ಬೆಂಗಳೂರು ಮೆಟ್ರೋ ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್‌ಸಿಎಲ್) ಈ ಕುರಿತು ಸೂಕ್ತ ವಿವರಣೆ ನೀಡದಿದ್ದರೆ, ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಬಿಎಂಆರ್ಸಿಎಲ್ನ 2ನೇ ಹಂತದ ಮೆಟ್ರೋ ರೈಲು ಯೋಜನೆಯು ಅಸಮರ್ಪಕವಾಗಿದೆ ಎಂದು ಆರೋಪಿಸಿ ಕಾಮಗಾರಿಗೆ ತಡೆ ನೀಡುವಂತೆ ಕೋರಿ ಬೆಂಗಳೂರು ಪರಿಸರ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರ ವಿಧಿಸಿದ್ದ ಷರತ್ತುಗಳನ್ನು ಪಾಲಿಸಿಲ್ಲ. ನಿಯಮಾನುಸಾರ ಜಾರಿ ಮಾಡಬೇಕಿದ್ದ ಸಮಗ್ರ ಸಾರಿಗೆ ಯೋಜನೆ ರೂಪಿಸಿಲ್ಲ. ಅದೇ ರೀತಿ ಏಕೀಕೃತ ಸಂಚಾರದಟ್ಟಣೆ ವ್ಯವಸ್ಥೆ ರೂಪಿಸಿಲ್ಲ. ಹೀಗಾಗಿ ಬಿಎಂಆರ್‌ಸಿಎಲ್ ಕಾಮಗಾರಿಗೆ ತಡೆ ನೀಡಬೇಕು ಎಂದು ಕೋರಿದರು.
ಈ ಕುರಿತು ಕೇಂದ್ರ ಸರ್ಕಾರ ಮುಂಬರುವ ಮಾರ್ಚ್ 20ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿತು. ಹಾಗೆಯೇ ಷರತ್ತು ಪಾಲಿಸಿಲ್ಲವಾದರೆ ಬಿಎಂಆರ್‌ಸಿಎಲ್ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ಪೀಠ ಅಭಿಪ್ರಾಯಟ್ಟಿತು. ಇನ್ನು ಷರತ್ತುಗಳನ್ನು ಪಾಲಿಸಲಾಗಿದೆಯೇ ಎಂಬ ಬಗ್ಗೆ ಬಿಎಂಆರ್‌ಸಿಎಲ್ ಮುಂದಿನ ವಿಚಾರಣೆ ವೇಳೆ ಲಿಖಿತ ವಿವರಣೆ ನೀಡಬೇಕು. ಇಲ್ಲದಿದ್ದರೆ ಮೆಟ್ರೋ ರೈಲು ಯೋಜನೆಗೆ ತಡೆ ನೀಡಲು ಪೀಠ ಹಿಂಜರಿಯುವುದಿಲ್ಲ ಎಂದು ಬಿಎಂಆರ್‌ಸಿಎಲ್ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ ವಿಚಾರಣೆಯನ್ನು ಮಾ.24ಕ್ಕೆ ಮುಂದೂಡಿತು.