ಬೆಂಗಳೂರು : ಆರ್.ಟಿ ನಗರದ ಮಠದಹಳ್ಳಿ ಸ್ಮಶಾನದ ಸುತ್ತಲಿನ ಜಾಗ ಹಾಗೂ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಆರ್.ಟಿ ನಗರ ನಿವಾಸಿಗಳಾದ ಡಿ. ಚಂದ್ರ, ಎಲ್. ತಿಲಕ್ ಕುಮಾರ್ ಹಾಗೂ ಟಿ ಪ್ರಕಾಶ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿತು.
ಒತ್ತುವರಿ ಆಗಿದೆ ಎನ್ನಲಾದ ಸ್ಮಶಾನ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಲು ಬಿಬಿಎಂಪಿ ಆಯುಕ್ತರು ಓರ್ವ ಅಧಿಕಾರಿ ನಿಯೋಜಿಸಬೇಕು. ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಅರ್ಜಿದಾರರು ಆರೋಪಿಸಿರುವಂತೆ ಸ್ಮಶಾನ ಒತ್ತುವರಿಯಾಗಿದೆಯೇ ಎಂಬುದರ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ
ಆರ್.ಟಿ ನಗರದ ಮಠದಹಳ್ಳಿಯ ಸರ್ವೆ ನಂಬರ್ 46 ರಲ್ಲಿನ ಜಾಗ ಸರ್ಕಾರಿ ಸ್ಮಶಾನದ ಭೂಮಿಯಾಗಿದೆ. ಅದರ ಸುತ್ತಲಿನ ಪ್ರದೇಶವನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಸ್ಮಶಾನದ ರಸ್ತೆಯನ್ನೂ ಒತ್ತುವರಿ ಮಾಡಿದ್ದು, ಜನರ ಸಂಚಾರಕ್ಕೆ ಅಡ್ಡಿಯಾಗಿದೆ. ಆದ್ದರಿಂದ ಸ್ಮಶಾನ ಭೂಮಿ ಸುತ್ತಲಿನ ಒತ್ತುವರಿ ತೆರವುಗೊಳಿಸುವಂತೆ ಬಿಬಿಎಂಪಿ ಸೇರಿದಂತೆ ಸಂಬಂಧಿತ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.