ಬೆಂಗಳೂರು: ಕೊರೊನಾ ಲಾಕ್ಡೌನ್ ನಿಂದ ಮದುವೆ ಸೇರಿದಂತೆ ಬಹುತೇಕ ಎಲ್ಲಾ ಸಮಾರಂಭಗಳು ಸದ್ಯ ರದ್ದಾಗಿದ್ದು, ಫೋಟೋಗ್ರಫಿ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ.
ಕೊರೊನಾದಿಂದಾಗಿ ಫೊಟೋಗ್ರಾಫರ್ ಹಾಗೂ ವಿಡಿಯೊಗ್ರಾಫರ್ ಗಳ ಬಿಸಿನೆಸ್‌ಗೂ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಅಂದಾಜು 10 ಸಾವಿರ ಫೋಟೋ ಸ್ಟುಡಿಯೋಗಳಿದ್ದು, ಈ ಪೈಕಿ ಬೆಂಗಳೂರಿನಲ್ಲಿಯೇ 3 ಸಾವಿರ ಸ್ಟುಡಿಯೋಗಳಿವೆ. ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲೂಕುವಾರು ಸಂಘ ನಿರ್ಮಿಸಿಕೊಂಡು ಫೋಟೋಗ್ರಾಫರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳವರೆಗೂ ಮದುವೆ, ನಾಮಕರಣ, ಉಪನಯನ ಸೇರಿದಂತೆ ಕಾರ್ಪೋರೇಟ್ ಕ್ಷೇತ್ರದ ಸಮಾರಂಭಗಳು ನಡೆಯುತ್ತವೆ. ಯಾವುದೇ ಸಭೆ ಸಮಾರಂಭಗಳು ನಡೆದರೆ ಫೋಟೊಗ್ರಾಫರ್ ಹಾಗೂ ವಿಡಿಯೋ ಗ್ರಾಫರ್‌ಗಳು ಇರಲೇಬೇಕು. ಒಂದು ವೇಳೆ, ಅವರು ಇಲ್ಲದಿದ್ದರೆ ಕಾರ್ಯಕ್ರಮ ಮುಗಿಯುವುದೇ ಇಲ್ಲ. ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ವಿಡಿಯೋಗ್ರಾಫರ್ ಹಾಗೂ ಫೋಟೊಗ್ರಾಫರ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಮೊಬೈಲ್ ಕಂಪನಿಗಳು ಉತ್ತಮ ಗುಣಮಟ್ಟದ ಕ್ಯಾಮರಾ ಸೌಲಭ್ಯಗಳಿಂದಾಗಿ ಗ್ರಾಹಕರು ಸಹ ಫೋಟೊಗಳಿಗಾಗಿ ಸ್ಟುಡಿಯೋಗಳಿಗೆ ಹೋಗದೆ ತಮ್ಮ ಮೊಬೈಲ್‌ಗಳಲ್ಲಿಯೇ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದಾರೆ. ಇದು ಫೋಟೊಗ್ರಾಫ್ ಉದ್ಯಮಕ್ಕೆ ಮೊದಲೇ ಹೊಡೆತ ನೀಡಿತ್ತು.
ಈಗ ಗಾಯದ ಮೇಲೆ ಬರೆ ಎಳೆದಂತೆ ಲಾಕ್ ಡೌನ್ ಪರಿಣಾಮ ಫೋಟೊಗ್ರಾಫರ್ ಗಳನ್ನು ಕೇಳುವವರೇ ಇಲ್ಲವಾಗಿದೆ. ಫೋಟೊಗ್ರಾಫರ್, ವಿಡಿಯೋಗ್ರಾಫರ್ ಗಳು, ಡಿಸೈನರ್ಸ್, ಬೈಡಿಂಗ್, ಫ್ರೇಮ್ ವರ್ಕ್ ಆಲ್ಬಮ್ ಪ್ರಿಂಟಿಂಗ್, ಲ್ಯಾಬ್‌ನಲ್ಲಿ ಕೆಲಸ ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ರಾಜ್ಯದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ಈ ಉದ್ಯಮ ಅವಲಂಬಿಸಿಕೊಂಡಿದ್ದಾರೆ. ಸದ್ಯ ಕೊರೊನಾದಿಂದಾಗಿ ಯಾವುದೇ ಶುಭ ಸಮಾರಂಭಗಳು ನಡೆಯದ ಕಾರಣ ಫೋಟೋಗ್ರಾಫರ್ ಗಳ ಬದುಕು ದುಸ್ತರವಾಗಿದೆ.
ಛಾಯಾಚಿತ್ರಕಾರರನ್ನು 20012-13 ನೇ ಸಾಲಿನಲ್ಲಿ ಅಸಂಘಟಿತ ವರ್ಗಕ್ಕೆ ಸೇರಿಸಿದ್ದು, ಬಿಟ್ಟರೆ ಸರ್ಕಾರದಿಂದ ಈವರೆಗೂ ಯಾವುದೇ ಸೌಲಭ್ಯ ಲಾಭವಾಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸಹಾಯಧನ ಸಿಕ್ಕಿಲ್ಲ. ಸ್ವಯಂಪ್ರೇರಿತವಾಗಿ ಕಷ್ಟದಲ್ಲಿರುವ ಫೋಟೋಗ್ರಾಫರ್ ಗಳಿಗೆ ಕೈಲಾದಷ್ಟು ಸಹಾಯ ನಾವೇ ಮಾಡುತ್ತಿದ್ದೇವೆ. ಸದ್ಯ ಕೊರೊನಾ ವೈರಸ್ ನಿಂದ ಕಂಗೆಟ್ಟಿದ್ದು ರಾಜ್ಯ ಸರ್ಕಾರ ಫೋಟೊಗ್ರಾಫರ್ ಗಳ ನೆರವಿಗೆ ಧಾವಿಸಬೇಕು.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ನೀಡಲಾಗಿದೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ರಾಜ್ಯ ಫೋಟೊಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಸ್.ಪರಮೇಶ್ ತಿಳಿಸಿದ್ದಾರೆ.