ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಹುಲ್ ಜೊತೆಗಿನ ತಮ್ಮ ಫೋಟೋ ಇರುವ ಬಗ್ಗೆ ಸ್ಪಷ್ಟನೆ ನೀಡಿದ ಕಂದಾಯ ಸಚಿವ ಆರ್.ಅಶೋಕ್ ಅವರು, ನನ್ನ ಕ್ಷೇತ್ರ ಪದ್ಮನಾಭನಗರದಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ನಾಮಕರಣ ಕಾರ್ಯಕ್ರಮ ಇತ್ತು. ಆ ಸಂದರ್ಭದಲ್ಲಿ ಯಾರೋ ಫೋಟೋ ತೆಗೆದಿರಬಹುದು. ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಇದೆಲ್ಲಾ ಸರ್ವೇಸಾಮಾನ್ಯ ಎಂದರು.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಬಹಳ ನಾಯಕರ ಜೊತೆ ಅವರು ಫೋಟೋ ತೆಗೆದುಕೊಂಡಿದ್ದಾರೆ. ಸಂಬರಗಿ ಜೊತೆಯು ಫೋಟೋ ಇದೆ. ಇಂದಿನ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಜೊತೆಗೂ ಫೋಟೊ ತೆಗೆಸಿಕೊಂಡಿದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲರೂ ಅವರ ಜೊತೆ ಸಂಪರ್ಕದಲ್ಲಿದ್ದಾರೆ ಎಂಬ ಅರ್ಥ ಅಲ್ಲ. ಸಾರ್ವಜನಿಕ ಬದುಕಿನಲ್ಲಿ ಇದ್ದಾಗ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ನಮಗೂ ಅವರಿಗೂ ಸಂಬಂಧವಿಲ್ಲ ಎಂದು ಹೇಳಿದರು.
ಫೋಟೋ ತೆಗೆಸಿಕೊಂಡರೆ ಇಂತಹ ಆಪಾದನೆ ಕೇಳಬೇಕು. ಫೋಟೊ ತೆಗೆಸಿಕೊಳ್ಳದಿದ್ದರೆ ಇವರಿಗೆ ಎಷ್ಟು ದವಲತ್ತು ಎಂದು ಮಾತನಾಡುತ್ತಾರೆ. ಫೋಟೊ ತೆಗೆಸಿಕೊಂಡರು ತಪ್ಪು, ತೆಗೆಸಿಕೊಳ್ಳದಿದ್ದರೂ ತಪ್ಪು ಸಾರ್ವಜನಿಕ ಜೀವನದಲ್ಲಿ ಇಂಥವುಗಳನ್ನು ಹೇಳಬೇಕಾಗುತ್ತದೆ ಎಂದರು.
ವಿದೇಶ ಪ್ರವಾಸಕ್ಕೆ ಹೋಗುವುದು ತಪ್ಪಲ್ಲ. ಆದರೆ, ಹವಾಲಾ, ಡ್ರಗ್ಸ್ ಪ್ರಕರಣದಲ್ಲಿ ತೊಡಗುವುದು ಅಪರಾಧ. ನನಗೆ ಇಸ್ಪೀಟ್ ಕೂಡ ಆಡುವುದು ಗೊತ್ತಿಲ್ಲ. ಇನ್ನು ಕ್ಯಾಸಿನೋ ಏನು ನೋಡಲಿ ಎಂದರು.
ವ್ಯಂಗ್ಯ: ಶಾಸಕ ಜಮೀರ್ ಅಹಮದ್ ಅವರು ಎಲ್ಲಾ ವಿಷಯದಲ್ಲೂ ಇರುತ್ತಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯಲ್ಲೂ ಇದ್ದರು. ರಾಮಮಂದಿರ ವಿಷಯದಲ್ಲೂ ಬರ್ತಾರೆ. ಜಮೀರ್ ಅವರಿಗೆ ಮುಸ್ಲಿಂ ನಾಯಕನಾಗಬೇಕೆಂಬ ಆಸೆ ಉಂಟಾಗಿರಬಹುದು. ಹಿರಿಯ ನಾಯಕ ಜಾಫರ್ ಶರೀಫ್ ನಂತರ ನಾನೇ ಮುಸ್ಲಿಂ ಲೀಡರ್ ಆಗಬೇಕು ಅಂತ ಎಲ್ಲ ಮೈಮೇಲೆ ಹಾಕಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.