ಬೆಂಗಳೂರು : ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ 54 ಪೊಲೀಸರಿಗೆ ಸಿಬಿಐ ನೀಡಿದ್ದ ನೋಟಿಸ್ ಕುರಿತಂತೆ, ನಿನ್ನೆ ಸಿಬಿಐ ಮುಂದೆ ಪೊಲೀಸರು ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ದಾಖಲೆಗಳನ್ನು ನೀಡಿದ್ದಾರೆ.
ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ಸದ್ಯ ನಡೆಸುತ್ತಿದ್ದಾರೆ. ಒಟ್ಟು 54 ಪೊಲೀಸ್ ಇನ್ಸ್ ಪೆಕ್ಟರ್ಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಸೂಚಿಸಿತು. ಹೀಗಾಗಿ ಸಿಬಿಐ ಅಧಿಕಾರಿಗಳ ಎದುರು ನಿನ್ನೆ ಕೆಲ ಠಾಣಾಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದು, ಸಿಬಿಐ ಕೇಳಿದ ಕೆಲ ದಾಖಲಾತಿಗಳನ್ನು ಸಿಬಿಐಗೆ ಒಪ್ಪಿಸಿದ್ದಾರೆಂದು ತಿಳಿದು ಬಂದಿದೆ.
ಒಂದು ವರ್ಷದ ಹಿಂದಿನಿಂದ ನಡೆದಿದೆ ಎನ್ನಲಾಗಿರುವ ಫೋನ್ ಟ್ಯಾಪಿಂಗ್ ಸಂಬಂಧ ಸಿಲಿಕಾನ್ ಸಿಟಿಯ ಪೊಲೀಸ್ ಠಾಣಾಧಿಕಾರಿಗಳು ಹಲವಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಫೋನ್ ಟ್ಯಾಪಿಂಗ್ ಮಾಡಿದ್ದರು. ಆದರೆ ಅದರಲ್ಲಿ ಕೆಲವೊಂದು ಇನ್ಸ್ಪೆಕ್ಟರ್ಗಳು ಹಿರಿಯ ಅಧಿಕಾರಿಗಳ ಶಿಫಾರಸ್ಸಿನಂತೆ ರಾಜಕಾರಣಿಗಳ ಪೋನ್ಗಳನ್ನು, ಸ್ವಾಮೀಜಿಗಳ ಫೋನ್ಗಳನ್ನ ಟ್ಯಾಪ್ ಮಾಡಿರುವ ಕಾರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಸಿಬಿಐ ಸೂಚಿಸಿತ್ತು.
ಹೀಗಾಗಿ ಕೆಲ ಠಾಣಾಧಿಕಾರಿಗಳು ವಿಚಾರಣೆಗೆ ಹಾಜರಾಗಿದ್ದಾರೆ. ಇನ್ನು ಕೆಲವರಿಗೆ ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದ್ದು, ಕೆಲ ಪೊಲೀಸ್ ಅಧಿಕಾರಿಗಳು ಹಾಜರಾಗಲಿದ್ದಾರೆ.