ಬೆಂಗಳೂರು : ಹುಬ್ಬಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಸೆಂಟ್ರಲ್ ಜೈಲಿನಲ್ಲಿರುವ ಯುವರಾಜ್ ಸ್ವಾಮಿ ಹೇಳಿಕೆ ಪಡೆದುಕೊಂಡಿದ್ದಾರೆ.
ಯುವರಾಜ್ ಸ್ವಾಮಿ ಹೆಸರಿನಲ್ಲಿ ನನಗೆ ಕರೆ ಮಾಡಿದ್ದು, ಇದರ ಹಿಂದೆ ಫೋನ್ ಟ್ಯಾಪಿಂಗ್ ಮಾಡಿರುವುದಾಗಿ ಆರೋಪಿಸಿ ಗೃಹ ಸಚಿವರಿಗೆ ದೂರು ನೀಡಿದ ಹಿನ್ನೆಲೆ ನಗರ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸುವಂತೆ ಆದೇಶಿಸಿದ್ದರು. ಇದರಂತೆ ಅರವಿಂದ ಬೆಲ್ಲದ್ ಸಂಪರ್ಕಿಸಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು. ಕರೆ ಬಂದ ಮೊಬೈಲ್ ನಂಬರ್ ಆಧರಿಸಿ ಅಧಿಕಾರಿಗಳು ಜೈಲಿಗೆ ಎಂಟ್ರಿ ಕೊಟ್ಟಿದ್ದಾರೆ.
ಯುವರಾಜ್ ಹೇಳೋದೇನು?
ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ವಂಚಕ ಯುವರಾಜ್ನನ್ನು ತನಿಖಾಧಿಕಾರಿಗಳು ಪ್ರಶ್ನಿಸಿದಾಗ ನನಗೂ ಅರವಿಂದ ಬೆಲ್ಲದ್ ಅವರಿಗೆ ಮಾಡಿರುವ ಕರೆಗೂ ಯಾವುದೇ ಸಂಬಂಧವಿಲ್ಲ. ನನ್ನ ಬಳಿ ಮೊಬೈಲ್ ಇಲ್ಲ, ನಾನ್ಯಾರಿಗೂ ಕರೆ ಮಾಡಿಲ್ಲ, ಬೆಲ್ಲದ್ ಗೊತ್ತೇ ಇಲ್ಲ ಎಂದು ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಈಗಾಗಲೇ ಯುವರಾಜ್ ಹೆಸರಿನ ವ್ಯಕ್ತಿ ಕರೆ ಮಾಡಿರುವ ಬಗ್ಗೆ ಪೊಲೀಸರೆದುರು ಹೇಳಿಕೆ ನೀಡಿರುವ ಶಾಸಕ ಬೆಲ್ಲದ್, ತಮಗೆ ಕರೆ ಮಾಡಿದ್ದ ಮೊಬೈಲ್ ನಂಬರ್ಗಳನ್ನು ತನಿಖಾಧಿಕಾರಿಗೆ ನೀಡಿದ್ದಾರೆ. ಕರೆ ಮಾಡಿದ ನಂಬರ್ ಸಿಡಿಆರ್ ಮಾಹಿತಿ ಪಡೆಯಲು ಮುಂದಾಗಿದ್ದಾರೆ.
ಟವರ್ ಲೊಕೇಶನ್ ಹಾಗೂ ಮೊಬೈಲ್ ನಂಬರ್ ಯಾರ ಹೆಸರಿನಲ್ಲಿದೆ ಎಂಬುದರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಿಜವಾಗಿಯೂ ಯುವರಾಜ್ ಕರೆ ಮಾಡಿದ್ದಾನಾ? ಆತನ ಹೆಸರಿನಲ್ಲಿ ಬೇರೆಯವರು ಕರೆ ಮಾಡಿದ್ರಾ? ಅನ್ನೋದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.