ಬೆಂಗಳೂರು: ಲಾಕ್‍ಡೌನ್ ಜಾರಿ ಮಾಡಿದ ಬಳಿಕ ಕೆಲಸವಿಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅತಂತ್ರರಾಗಿರುವ ರಾಜ್ಯದ ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಸರ್ಕಾರಿ ಸಾರಿಗೆ ಮೂಲಕವೇ ಅವರ ಸ್ವಂತ ಊರಿಗೆ ಕಳಿಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಿಕೊಡಲು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ.ಮಲ್ಲಿಕಾರ್ಜುನ ಎಂಬುವವರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದಾರೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಏ. 21ರಂದು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
ಲಾಕ್‍ಡೌನ್ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ ಇರಿಸಲಾಗಿತ್ತು. ಈ 14 ದಿನದ ಕ್ವಾರಂಟೈನ್ ಅವಧಿ ಈಗಾಗಲೇ ಮುಕ್ತಾಯವಾಗಿದೆ. ವಲಸೆ ಕಾರ್ಮಿಕರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬರದಿದ್ದರೂ ಆಶ್ರಯ ಕೇಂದ್ರಗಳಲ್ಲಿ ಇಡುವುದು ಅವೈಜ್ಞಾನಿಕ. ಆದ್ದರಿಂದ ಆಶ್ರಯ ಕೇಂದ್ರಗಳಲ್ಲಿರುವ ರಾಜ್ಯದ ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಮತ್ತೊಮ್ಮೆ ಕೋವಿಡ್-19 ತಪಾಸಣೆಗೆ ಒಳಪಡಿಸಿ, ಸೋಂಕು ಇಲ್ಲದವರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಸಾರ್ವಜನಿಕ ಸಾರಿಗೆ ಮೂಲಕ ಅವರ ಸ್ವಂತ ಊರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡುವಂತೆ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.