ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಬೆಳಗಾವಿ ನಿವಾಸಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಮುಖ್ಯಸ್ಥೆ ರಾಜಶ್ರೀ ನಾಗರಾಜ್ ಎಂಬುವರು ಸುಪ್ರೀಂಕೋರ್ಟ್ಗೆ ಎಸ್ಎಲ್ಪಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ರಾಜ್ಯಾದ್ಯಂತ ಕೊರೊನಾ ವೇಗವಾಗಿ ಹಬ್ಬುತ್ತಿದ್ದರೂ ಸರ್ಕಾರ ಜೂನ್ 25ರಿಂದ ಪರೀಕ್ಷೆ ನಡೆಸಲು ಮುಂದಾಗಿದೆ. ಸರ್ಕಾರದ ಈ ನಿರ್ಧಾರ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಶಿಕ್ಷಕರ ಜೀವನವನ್ನು ಅಪಾಯಕ್ಕೆ ಸಿಲುಕಿಸಿದೆ. ಈ ಕುರಿತಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸದೆ ಇತ್ಯರ್ಥಪಡಿಸಿದೆ.
ರಾಜ್ಯದಲ್ಲಿ ಜೂ. 25ರಿಂದ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, 8.48 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಲಿದ್ದಾರೆ. 3 ಸಾವಿರಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಜತೆ ಪೋಷಕರು ಪ್ರಯಾಣಿಸುವ ಸಾಧ್ಯತೆಯಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಜನದಟ್ಟಣೆ ಉಂಟಾಗುತ್ತದೆ. ಈ ವೇಳೆ ಎಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೂ ಕೊರೊನಾ ಸೋಂಕು ಹರಡುವ ಅಪಾಯವಿದೆ. ಇದು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಬದುಕುವ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ರಾಜಶ್ರೀ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆ ಗಮನದಲ್ಲಿರಿಸಿಕೊಂಡು ಪರೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಹೀಗಾಗಿ, ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪರೀಕ್ಷೆ ನಡೆಸಲು ಅನುಮತಿಸಿ ಮೇ 27ರಂದು ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಮತ್ತು ಜೂ. 25ಕ್ಕೆ ನಿಗದಿಯಾಗಿರುವ ಪರೀಕ್ಷೆಗಳನ್ನು ನಡೆಸದಂತೆ ರಾಜ್ಯ ಸರ್ಕಾರಕ್ಕೆ ಮತ್ತು ಎಸ್ಎಸ್ಎಲ್‌ಸಿ ಪರೀಕ್ಷಾ ಮಂಡಳಿಗೆ ಸೂಚನೆ ನೀಡಬೇಕು. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಮತ್ತು ಪೂರ್ವಭಾವಿ ಪರೀಕ್ಷಾ ಫಲಿತಾಂಶಗಳನ್ನೇ ಪರಿಗಣಿಸಿ ಅಂತಿಮ ಫಲಿತಾಂಶ ಪ್ರಕಟಿಸಲು ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್ಗೆ ಅರ್ಜಿದಾರರು ಮನವಿ ಮಾಡಿದ್ದಾರೆ.