ಬೆಂಗಳೂರು: ಕೊರೊನಾ ಸೋಂಕು ತಡೆ ಹಾಗೂ ನಿರ್ಮೂಲನೆಯಲ್ಲಿ ನಿರತರಾಗಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಯುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ 'ಕರ್ನಾಟಕ ಸಾಂಕ್ರಾಮಿಕ ಕಾಯಿಲೆಗಳ ಸುಗ್ರೀವಾಜ್ಞೆ - 2020'ನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಈ ಕುರಿತು ವಕೀಲ ಜಿ.ಆರ್. ಮೋಹನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಸುದೀರ್ಘ ವಾದ-ಪ್ರತಿವಾದ ಆಲಿಸಿದ ಪೀಠ, ಇಡೀ ಸುಗ್ರೀವಾಜ್ಞೆಯನ್ನು ಅರ್ಜಿಯಲ್ಲಿ ಪ್ರಶ್ನಿಸಿಲ್ಲ. ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಸಂಜ್ಞೆಯ (ಕಾಗ್ನಿಜೆಬಲ್) ಮತ್ತು ಜಾಮೀನುರಹಿತ ಎಂದು ಹೇಳಲಾಗಿರುವ ಅಪರಾಧ ಕೃತ್ಯಗಳನ್ನು ರಾಜ್ಯದ ಸುಗ್ರೀವಾಜ್ಞೆಯಲ್ಲಿ ಅಸಂಜ್ಞೆಯ ಮತ್ತು ಜಾಮೀನು ನೀಡಬಹುದಾದದ ಅಪರಾಧ ಕೃತ್ಯಗಳನ್ನಾಗಿ ಮಾಡಲಾಗಿದೆ ಎಂದು ಅರ್ಜಿದಾರರು ಹೇಳುತ್ತಾರೆ. ಆದರೆ, ವಾಸ್ತವದಲ್ಲಿ ಕೇಂದ್ರದ ಸುಗ್ರೀವಾಜ್ಞೆಯಲ್ಲಿ ಗುರುತಿಸಲಾಗಿರುವ ಅಪರಾಧ ಕೃತ್ಯಗಳೇ ಬೇರೆ ರಾಜ್ಯದ ಸುಗ್ರೀವಾಜ್ಞೆಯಲ್ಲಿ ಗುರುತಿಸಲಾಗಿರುವ ಅಪರಾಧ ಕೃತ್ಯಗಳೇ ಬೇರೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿ ಅಂಗೀಕರಿಸಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಇದಕ್ಕೂ ಮೊದಲು ವಾದ ಮಂಡಿಸಿದ ಅರ್ಜಿದಾರ ಜಿ.ಅರ್.ಮೋಹನ್, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಗ್ರೀವಾಜ್ಞೆ ಏಕಕಾಲಕ್ಕೆ ಜಾರಿಗೆ ಬಂದಿವೆ. ಕೇಂದ್ರದ ಸುಗ್ರೀವಾಜ್ಞೆ ಎಲ್ಲಾ ರಾಜ್ಯಗಳಿಗೂ ಅನ್ವಯವಾಗಲಿದೆ. ಹಾಗಾಗಿ, ಕಾನೂನು ಜಾರಿ ಸಂಸ್ಥೆಗಳಿಗೆ ಯಾವ ಸುಗ್ರೀವಾಜ್ಞೆಯಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ ಗೊಂದಲ ಉಂಟಾಗಿದೆ. ಅಲ್ಲದೇ ರಾಜ್ಯದ ಸುಗ್ರೀವಾಜ್ಞೆಯು ಕೇಂದ್ರದ ಸುಗ್ರೀವಾಜ್ಞೆಯಂತೆ ಕಠಿಣವಾಗಿಲ್ಲ. ಹೀಗಾಗಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳನ್ನು ನಿರ್ವಹಿಸಲು ಕಷ್ಟವಾಗುತ್ತದೆ ಎಂದರು.
ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ವಾದಿಸಿ, ರಾಜ್ಯದ ಸುಗ್ರೀವಾಜ್ಞೆ ಬಹಳ ಸ್ಪಷ್ಟವಾಗಿದೆ. ಯಾವುದೇ ಗೊಂದಲ ಇಲ್ಲ. ಕೋವಿಡ್-19 ವಿರುದ್ಧ ಹೋರಾಟ ಮಾಡುವುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸದ್ಯದ ಆದ್ಯತೆ ಹಾಗೂ ಅವಶ್ಯಕತೆಯಾಗಿದೆ ಎಂದರು.
ಅರ್ಜಿದಾರರ ಕೋರಿಕೆ ಏನಿತ್ತು?
ವೈದ್ಯರು ಹಾಗೂ ಇನ್ನಿತರೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರೆ ಅದನ್ನು ಸಂಜ್ಞೆಯ (ಕಾಗ್ನಿಜೆಬಲ್) ಮತ್ತು ಜಾಮೀನುರಹಿತ ಅಪರಾಧ ಕೃತ್ಯ ಎಂದು ಪರಿಗಣಿಸಿ, ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಅಲ್ಲದೆ, ತಪ್ಪಿತಸ್ಥರ ವಿರುದ್ಧ ದಂಡ ಸಹಿತ 7 ವರ್ಷ ಕಠಿಣ ಶಿಕ್ಷೆ ನಿಗದಿಪಡಿಸಿದೆ.
ಆದರೆ, ರಾಜ್ಯ ಸರ್ಕಾರ ಏ.22ರಂದು ಹೊರಡಿಸಿರುವ ಸುಗ್ರೀವಾಜ್ಞೆಯಲ್ಲಿ ಕೋವಿಡ್-19 ಕರ್ತವ್ಯ ನಿರತ ವೈದ್ಯರು ಹಾಗೂ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣವನ್ನು ಅಸಂಜ್ಞೆಯ (ನಾನ್ ಕಾಗ್ನಿಜೆಬಲ್) ಹಾಗೂ ಜಾಮೀನು ಸಹಿತ ಅಪರಾಧ ಕೃತ್ಯ ಎಂದು ಪರಿಗಣಿಸಲಾಗಿದೆ. ಹಾಗೆಯೇ ತಪ್ಪಿತಸ್ಥರಿಗೆ ಮೂರು ವರ್ಷ ಶಿಕ್ಷೆ, 50 ಸಾವಿರ ದಂಡ ವಿಧಿಸುವ ಅವಕಾಶ ನೀಡಲಾಗಿದ್ದು, ರಾಜ್ಯದ ನಿಯಮಗಳು ದುರ್ಬಲವಾಗಿವೆ ಎಂದು ಅರ್ಜಿದಾರರು ಆರೋಪಿಸಿದ್ದರು.