ಬೆಂಗಳೂರು : ಸ್ನೇಹಿತ ಎಂದು ನಂಬಿದವನ ಮೋಸದಿಂದ ವ್ಯಕ್ತಿಯೋರ್ವ ಸಂಸಾರದ ನೆಮ್ಮದಿಯ ಜೊತೆಗೆ ಮಗನನ್ನೂ ದಾರುಣವಾಗಿ ಕಳೆದುಕೊಂಡ ಘಟನೆ ನಗರದ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತ ಪ್ರವೀಣ್ ಹಾಗೂ ಆತನ ಮಾಜಿ ಪತ್ನಿ ಪುಷ್ಪಾ ಮೇಲಿನ ದ್ವೇಷಕ್ಕೆ ಅವರ ಮಗನನ್ನು ಅಮಾನುಷವಾಗಿ ಕೊಲೆಗೈದಿದ್ದ ಸಂಪತ್ ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೇತನ್ ಕೊಲೆಗೀಡಾದ ಬಾಲಕ.
ಟಿಪ್ಪರ್ ಲಾರಿ ಚಾಲಕನಾಗಿದ್ದ ಪ್ರವೀಣ್ ಮತ್ತು ಆಂಧ್ರಪ್ರದೇಶ ಮೂಲದ ಸಂಪತ್ ಸ್ನೇಹಿತರು. ಸ್ನೇಹದ ಸಲುಗೆಯಿಂದ ಪ್ರವೀಣನ ಮನೆಗೆ ಹೋಗುತ್ತಿದ್ದ ಸಂಪತ್ಗೆ ನಂತರ ಆತನ ಪತ್ನಿ ಪುಷ್ಪಾಳೊಂದಿಗೆ ಅಕ್ರಮ ಸಂಬಂಧ ಏರ್ಪಟ್ಟಿತ್ತು. ಬರುಬರುತ್ತಾ ಪ್ರವೀಣ್ ಮನೆಯಲ್ಲಿ ಇರದಿದ್ದಾಗ ಸಂಪತ್ ಆತನ ಮನೆಗೆ ಹೋಗಿ ಬರಲಾರಂಭಿಸಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಪ್ರವೀಣ್ ಪತ್ನಿ ಪುಷ್ಪಾಳಿಂದ ವಿಚ್ಚೇದನ ಪಡೆದು, ಪುತ್ರ ಚೇತನ್ನೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾದ ಕೆಲ ದಿನಗಳಲ್ಲೇ ದೂರ: ಇತ್ತ ಪ್ರವೀಣ್ ಜೊತೆ ವಿಚ್ಚೇದನ ಪಡೆದ ಪುಷ್ಪಾ, ಸಂಪತ್ ಜೊತೆ ರಿಜಿಸ್ಟ್ರರ್ ಮದುವೆಯಾಗಿದ್ದಳು. ಅತ್ತ ಸಂಪತ್ ಕೆಜಿಎಫ್ನಲ್ಲಿ ವಾಸವಿದ್ದ. ಕೆಲವೇ ದಿನಗಳಲ್ಲಿ ಪುಷ್ಪಾಳ ನಡತೆ ಮೇಲೆ ಅನುಮಾನ ಪಟ್ಟ ಸಂಪತ್ ಬಂದಾಗಲೆಲ್ಲ ಪದೇ ಪದೇ ಕ್ಯಾತೆ ತೆಗೆಯಲಾರಂಭಿಸಿದ್ದ. ಇದರಿಂದ ನೊಂದ ಪುಷ್ಪಾ, ಸಂಪತ್ನ ಮೊಬೈಲ್ ನಂಬರ್ ಬ್ಲಾಕ್ ಮಾಡಿ ಆತನಿಂದ ಅಂತರ ಕಾಪಾಡಿದ್ದಳು. ಅಲ್ಲದೆ, ಸಾಕಷ್ಟು ಬಾರಿ ಪುಷ್ಪಾ ಮನೆ ಬಳಿ ಬಂದರೂ ಆಕೆ ಸಿಕ್ಕಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಸಂಪತ್ ಆಕೆಯ ಮಗಳನ್ನು ಕರೆದೊಯ್ದು ಆಕೆಯನ್ನೇ ಮುಂದಿಟ್ಟುಕೊಂಡು ಪುಷ್ಪಾಳಿಗೆ ಬೆದರಿಸಲು ಯತ್ನಿಸಿದ್ದನಂತೆ.
ಕರೆ ಸ್ವೀಕರಿಸದ್ದಕ್ಕೆ ಕೊಲೆ: ಆದರೆ, ಸಂಪತ್ ಜೊತೆ ಹೋಗಲು ಪುಷ್ಪಾಳ ಮಗಳು ಒಪ್ಪಿರಲಿಲ್ಲ. ನಂತರ ಪ್ರವೀಣ್ ಜೊತೆಗಿದ್ದ ಪುಷ್ಪಾಳ ಮಗ ಚೇತನ್ನನ್ನು ಅಪಹರಿಸಲು ಸಂಚು ರೂಪಿಸಿದ್ದ ಸಂಪತ್, ಚಿಲ್ಡ್ರನ್ವುಡ್ ಕೇಂದ್ರದಲ್ಲಿದ್ದ ಪ್ರವೀಣ್ ಪುತ್ರ ಚೇತನ್ ಬಳಿ ತೆರಳಿದ್ದ. ಬಾಲಕನನ್ನು ಕರೆದೊಯ್ದು ಆತನಿಗೆ ಬಿರಿಯಾನಿ ಹಾಗೂ ಚಾಕಲೇಟ್ ಕೊಡಿಸಿ, ಪುಷ್ಪಾಗೆ ಬೆದರಿಸಲು ಕರೆ ಮಾಡಿದ್ದ. ಅದರೆ ಪುಷ್ಪಾ ಸಂಪತ್ ಕರೆ ಸ್ವೀಕರಿಸಿರಲಿಲ್ಲ. ಇದರಿಂದಾಗಿ ಮತ್ತಷ್ಟು ಸಿಟ್ಟಿಗೆದ್ದ ಸಂಪತ್ ಪುಷ್ಪಾಳಿಗೆ ಬುದ್ಧಿ ಕಲಿಸುವುದಕ್ಕೆ ಎಂದು ಪಕ್ಕದಲ್ಲಿದ್ದ ಕೆರೆಗೆ ಬಾಲಕ ಚೇತನ್ನನ್ನು ತಳ್ಳಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಇತ್ತ ಮಗನಿಗಾಗಿ ಎಲ್ಲೆಡೆ ಹುಡುಕಾಡಿದ್ದ ಪುಷ್ಪಾ ಹಾಗೂ ಪ್ರವೀಣ್ ಸಂಜೆ ಸಂಪತ್ನ ಬಳಿ ಬಂದು ಕೇಳಿದಾಗಲೂ 'ತನಗೆ ಗೊತ್ತಿಲ್ಲ' ಎಂದು ರೂಮ್ ಸೇರಿದವನು ಆತ್ಮಹತ್ಯೆಗೆ ಯತ್ನಿಸಿದ್ದ. ಇತ್ತ ಪ್ರವೀಣ್ ತನ್ನ ಮಗ ಕಾಣುತ್ತಿಲ್ಲವೆಂದು ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆತ್ಮಹತ್ಯೆ ಯತ್ನದ ನಂತರ ಸಂಪತ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಸಂಪತ್ ಅಸಲಿ ವಿಚಾರ ಬಾಯ್ಬಿಟ್ಟಿದ್ದು 'ಪುಷ್ಪಾಳ ಮೇಲಿನ ಸಿಟ್ಟಿಗೆ ಆಕೆಯ ಮಗ ಚೇತನ್ ನನ್ನ ಕೆರೆಗೆ ತಳ್ಳಿರುವುದಾಗಿ' ಒಪ್ಪಿಕೊಂಡಿದ್ದಾನೆ. ಕೆರೆಯಲ್ಲಿ ಹುಡುಕಾಟ ನಡೆಸಿದಾಗ 9 ದಿನಗಳ ನಂತರ ಚೇತನ್ ಮೃತದೇಹ ದೊರೆತಿದೆ. ಪ್ರಕರಣ ಸಂಬಂಧ ಶನಿವಾರ ಆರೋಪಿ ಸಂಪತ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.