ಬೆಂಗಳೂರು: ಆರಂಭದಲ್ಲೇ ಬಿಬಿಎಂಪಿಯ ನೂತನ ಆಯುಕ್ತರು ಹಾಗೂ ಕಾರ್ಪೊರೇಟರ್ಸ್ ತೀರ್ಮಾನಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೇಳುವ ಪರಿಸ್ಥಿತಿ ಎದುರಾಗಿದೆ.
ಒಂದೆಡೆ ನಗರದಲ್ಲಿ ಜಾಹೀರಾತುಗಳು ಬೇಡವೇ ಬೇಡ ಎಂದು ಕೌನ್ಸಿಲ್ ತೀರ್ಮಾನಿಸಿದರೆ, ನೂತನ ಆಯುಕ್ತರಾಗಿ ಬಂದಿರುವ ಅನಿಲ್ ಕುಮಾರ್ ಪಾಲಿಕೆ ಆದಾಯದ ದೃಷ್ಟಿಯಿಂದ ಜಾಹೀರಾತು ಅಗತ್ಯವಾಗಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೂ ಈ ಬಗ್ಗೆ ಕೋರ್ಟ್‌ನಲ್ಲೂ ವಿಚಾರಣೆ ನಡೆದಿದ್ದು, ಕೌನ್ಸಿಲ್ ಸಭೆಗೆ ಈ ಬಗ್ಗೆ ಸ್ಪಷ್ಟಪಡಿಸುವಂತೆ ಪಾಲಿಕೆ ಸದಸ್ಯರು ಸಭೆಯಲ್ಲಿ ಒತ್ತಾಯಿಸಿದರು.
ಬಿಬಿಎಂಪಿಯಿಂದ ಈಗಾಗಲೇ ಬೈಲಾ ಮಾಡಿದ್ದು, ಇದು ವಾಣಿಜ್ಯ ಕಟ್ಟಡಗಳ ನಾಮಫಲಕಗಳಿಗೆ ಮಾತ್ರ ಸೀಮಿತವಾಗಿದೆ. ಸರ್ಕಾರದ ವತಿಯಿಂದ ಮಾಡಿರುವ ಬೈಲಾದಲ್ಲಿ ಸಾರ್ವಜನಿಕ ಜಾಹೀರಾತು, ದೊಡ್ಡದೊಡ್ಡ ಹೋಲ್ಡಿಂಗ್ಸ್ ಅಳವಡಿಕೆ, ಸೈನೇಜ್‌ಗಳ ಅಳವಡಿಕೆ ಬಗ್ಗೆ ನಿಯಮ ಮಾಡಲಾಗಿತ್ತು. ಹಿಂದೆ 2006ರಲ್ಲಿ ಇದ್ದ ಪಾಲಿಕೆ ಬೈಲಾದ ಪ್ರಕಾರ ಜಾಹೀರಾತು ಫಲಕಗಳ ಅಳವಡಿಕೆ ಕುರಿತ ನಿಯಮಗಳಿದ್ದವು. ಈ ಮೂರೂ ನಿಯಮಗಳನ್ನು ಸಮ್ಮಿಶ್ರ ಮಾಡಿ, ವಿಸ್ತೃತ ನಿಯಮ ತರುವುದು ಸೂಕ್ತ ಎಂಬುದು ನೂತನ ಆಯುಕ್ತರ ಅಭಿಪ್ರಾಯ.
ಆದರೆ, ಕಾರ್ಪೊರೇಟರ್ಗಳು ಸಮರ್ಥಿಸಿಕೊಳ್ಳುತ್ತಿರುವ ಪಾಲಿಕೆಯ ಹೊಸ ಬೈಲಾ ಕೇವಲ ಬಸ್ ನಿಲ್ದಾಣ, ಪಾದಾಚಾರಿ ಮೇಲ್ಸೇತುವೆಯಲ್ಲಿ ಪಿಪಿಪಿ ಮಾದರಿಯಲ್ಲಿರುವ ಜಾಹೀರಾತಿಗೆ ಅವಕಾಶ ಕೊಟ್ಟು ಬೇರೆಲ್ಲಾ ಜಾಹೀರಾತುಗಳನ್ನು ಬ್ಯಾನ್ ಮಾಡುವುದು ಎಷ್ಟು ಸರಿ ಎಂಬುದು ಆಯುಕ್ತರ ನಿಲುವಾಗಿದೆ.
ಈ ಬಗ್ಗೆ ಮಾತನಾಡಿದ ಆಯುಕ್ತರಾದ ಬಿ ಹೆಚ್ ಅನಿಲ್ ಕುಮಾರ್, ಜಾಹೀರಾತುಗಳನ್ನು ಬಿಬಿಎಂಪಿ ಆದಾಯದ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ. ಅಲ್ಲದೆ, ಯಾವ ಪ್ರದೇಶಗಳಲ್ಲಿ ನಿಯಂತ್ರಿಸಬೇಕು ಅದನ್ನೂ ನೋಡಬೇಕು. ಹೀಗಾಗಿ ಪಾಲಿಕೆ ಸದಸ್ಯರ ಮನವೊಲಿಸಿ ಈ ವಿಚಾರಗಳ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು. ಸಾರ್ವಜನಿಕರ ಅಭಿಪ್ರಾಯಗಳನ್ನ ಪಡೆದು ಸಮಿತಿ ರಚನೆ ಮಾಡಿ, ಇದರ ಸಲಹೆಯಂತೆ ನಿಯಮಗಳನ್ನು ಅಂತಿಮಗೊಳಿಸಲಾಗುವುದು ಎಂದರು.
ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿದ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ, ಬಿಬಿಎಂಪಿಯ ಕೌನ್ಸಿಲ್ ನಿರ್ಣಯವೇ ಅಂತಿಮ. ಇದನ್ನು ಜಾರಿಗೆ ತರುವುದಷ್ಟೇ ಆಯುಕ್ತರ ಕೆಲಸ. ಕೌನ್ಸಿಲ್ ತೀರ್ಮಾನದ ವಿರುದ್ಧ ಅವರು ಹೇಳಿಕೆ ನೀಡುವ ಹಾಗಿಲ್ಲ ಎಂದರು.