ಬೆಂಗಳೂರು: ರಾಜರಾಜೇಶ್ವರಿ ನಗರದ ಮಲ್ಲತ್ತಹಳ್ಳಿ ಕೆರೆಯ ಒಟ್ಟು 71 ಎಕರೆ ಪ್ರದೇಶದಲ್ಲಿ ಯಾವುದೇ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನಗರದಲ್ಲಿನ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುತ್ತಿದ್ದ ಪೀಠಕ್ಕೆ ಮಧ್ಯಂತರ ಅರ್ಜಿ ಸಲ್ಲಿಸಿದ್ದ ಮಲ್ಲತ್ತಹಳ್ಳಿ ಕೆರೆಯಲ್ಲಿ ಶಿವನಪ್ರತಿಮೆ ಮತ್ತು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಮುಂದಾಗಿರುವ ಬಿಬಿಎಂಪಿ ಕ್ರಮವನ್ನು ಪ್ರಶ್ನಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾಯಮೂರ್ತಿ ಟಿ ವೆಂಕಟೇಶ್ ನಾಯಕ್ ಅವರ ನ್ಯಾಯಪೀಠ ಈ ಸೂಚನೆ ನೀಡಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥ ಪಡಿಸಿತು. ಅಲ್ಲದೇ ಕೆರೆ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು, ಯಾವುದೇ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಕೆರೆಯಲ್ಲಿ ಶಾಶ್ವತ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಕೋರಿದಲ್ಲಿ ತಿರಸ್ಕರಿಸಬೇಕು ಎಂದು ಸೂಚನೆ ನೀಡಿ ಈ ಸಂಬಂಧ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಪ್ರಸ್ತುತ ಈ ಕೆರೆಯಲ್ಲಿ ನೀರಿನ ಸಾಮರ್ಥ್ಯ 44 ಎಕರೆ ಪ್ರದೇಶ ಯಾವುದೇ ಕಾರಣಕ್ಕೂ ಕ್ಷಿಣಿಸದಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಸೂಚನೆ ನೀಡಿದೆ. ಅಲ್ಲದೇ ಕೆರೆಗೆ ಹೊಂದಿಕೊಂಡಂತೆ ನಿರ್ಮಾಣ ಮಾಡುತ್ತಿರುವ ಕಲ್ಯಾಣಿಯಲ್ಲಿ ಗಣೇಶ, ದುರ್ಗಾ ಮೂರ್ತಿಗಳ ನಿಮಜ್ಜನ ಸೇರಿದಂತೆ ನಿಗದಿತ ಧಾರ್ಮಿಕ ಚಟುವಟಿಕೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಬಾರದು.
ಈ ಚಟುವಟಿಕೆ ಪೂರ್ಣಗೊಂಡ ತಕ್ಷಣ ಇಡೀ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಈ ಕಾರ್ಯಗಳಿಂದ ಕಲ್ಯಾಣಿಯಲ್ಲಿ ಆಗುವ ಕಲುಷಿತ ನೀರು ಕೆರೆಗೆ ಸೇರದಂತೆ ನಿಗಾ ವಹಿಸಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿ, ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ದೇವರ ಪ್ರತಿಮೆಗಳನ್ನು ಮನೆಗಳಲ್ಲಿ ಮಾಡಿಕೊಳ್ಳಿ. ಅರಮನೆ ತರ ಮನೆ ನಿರ್ಮಿಸಿಕೊಂಡಿರುತ್ತಾರೆ ಕೆರೆಯಲ್ಲಿ ಯಾಕೆ ಬೇಕು. ಕೆರೆ ಪಕ್ಕದಲ್ಲಿ ಈ ತರ ಜಾಗ ಕೊಡೋದೆ ತಪ್ಪಾಗಲಿದೆ. ಜನರ ಭಾವನೆಗಳನ್ನು ಮುಂದೆ ತಂದು ಪರಿಸರ ಮಾಲಿನ್ಯ ಮಾಡುವುದು ಏಕೆ? ಎಂದು ನ್ಯಾಯಪೀಠ ಸರ್ಕಸರದ ಪರ ವಕೀಲರನ್ನು ಪ್ರಶ್ನಿಸಿತ್ತು. ಇದಕ್ಕೂ ಮುನ್ನ ಅರ್ಜಿ ವಿಚಾರಣೆ ವೇಳೆ ಪಾಲಿಕೆ ಅಧಿಕಾರಿಗಳ ಕ್ರಮಕ್ಕೆ ತೀವ್ರ ಆಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ, ಕೆರೆಯ ಪಕ್ಕದಲ್ಲಿಯೇ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಕಾರಣವೇನು? ಯಾಕೆ ಇದೆಲ್ಲಾ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿತು. ಜತೆಗೆ ಗಣೇಶ ಮೂರ್ತಿ ವಿಸರ್ಜನೆಗೆ ಬಿಬಿಎಂಪಿವತಿಯಿಂದ ಪ್ರತಿ ಏರಿಯಾದಲ್ಲಿ ಒಂದು ದೊಡ್ಡ ಲಾರಿಯಲ್ಲಿ ನೀರಿನ ವ್ಯವಸ್ಥೆ ಮಾಡಿದರೆ ಕೆರೆಗಳಿಗೆ ಸಮಸ್ಯೆ ಆಗೋದಿಲ್ಲವೇ ಎಂದು ತಿಳಿಸಿತು.
ಕೆರೆಯಲ್ಲಿ ಶಾಶ್ವತ ಕಟ್ಟಡ ನಿರ್ಮಿಸಿಲ್ಲ ಸರ್ಕಾರದ ಸಮರ್ಥನೆ: ಕೆರೆಯಲ್ಲಿ ಶಾಶ್ವತ ಕಟ್ಟಡಗಳ ನಿರ್ಮಾಣ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ಪ್ರಮಾಣ ಪತ್ರ ಸಲ್ಲಿಸಿದ್ದ ಸರ್ಕಾರ, ಮಲ್ಲತ್ತಹಳ್ಳಿ ಕೆರೆಯಲ್ಲಿ ಯಾವುದೆ ಶಾಶ್ವತ ಕಟ್ಟಡ ನಿರ್ಮಾಣ ಮಾಡಿಲ್ಲ.
ಧಾರ್ಮಿಕ ಆಚರಣೆಗೆ ಬಳಕೆ ಮಾಡುವ ಗಣೇಶ ಮತ್ತು ದುರ್ಗಾ ಮೂರ್ತಿಗಳ ವಿಲೇವಾರಿಗಾಗಿ ಕೆರೆಯಿಂದ 52 ಮೀಟರ್ ದೂರದಲ್ಲಿ ಕಲ್ಯಾಣಿ ನಿರ್ಮಿಸಲಾಗುತ್ತಿದ್ದು, ಒತ್ತುವರಿಯಾಗಿಲ್ಲ ಎಂದು ಹೈಕೋರ್ಟ್ ತಿಳಿಸಿತು. ಅಲ್ಲದೆ, ರಾಜ್ಯ ಸರ್ಕಾರದ ನಿರ್ದೇಶನದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಕೆರೆಯಲ್ಲಿ ಕಲ್ಯಾಣಿಯೊಂದಿಗೆ ಬಯಲುರಂಗ ಮಂದಿರ ಮಾದರಿ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, ಕಾಮಗಾರಿಯನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ(ಕೆಟಿಸಿಡಿಎ )ಯಿಂದ ಒಪ್ಪಿಗೆ ಪಡೆಯಲಾಗಿದೆ.
ಕೆರೆ ಆವರಣದದಿಂದ 52 ಮೀಟರ್ ದೂರದಲ್ಲಿ ಕಲ್ಯಾಣ ನಿರ್ಮಾಣ ಮಾಡಿಕೊಳ್ಳಲಾಗುತ್ತಿದೆ. ಇದು ಕೆರೆಯನ್ನು ಒತ್ತುವರಿ ಮಾಡಿರುವ ಆರೋಪ ಬರುವುದಿಲ್ಲ. ಧಾರ್ಮಿಕ ಚಟುವಟಿಕೆಗಳಾದ ಗಣೇಶ ಮತ್ತು ದುರ್ಗಾ ಪ್ರತಿಮೆಗಳ ವಿಲೇವಾರಿಯಿಂದ ಕರೆ ನೀರಿನಲ್ಲಿ ಆಗಬಹುದಾದ ಮಾಲಿನ್ಯವನ್ನು ತಡೆಯುವ ಉದ್ದೇಶದಿಂದ ಕಲ್ಯಾಣಿ ನಿರ್ಮಾಣ ಮಾಡಲಾಗುತ್ತಿದೆ. ಕಲ್ಯಾಣಿಯಲ್ಲಿರುವ ನೀರು ಕೆರೆ ನೀರಿನೊಂದಿಗೆ ಮಿಶ್ರಣವಾಗದೆ ಸ್ವಚ್ಛತೆ ಕಾಪಾಡುವ ಉದ್ದೇಶವನ್ನು ಹೊಂದಲಾಗಿದೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಕೆ ಮಾಡುವ ಕಲ್ಯಾಣಿಯ ನೀರನ್ನು ಚರಂಡಿ ಮೂಲಕ ಹೊರ ಕಳಿಸಲಾಗುವುದು. ಆದರೆ, ಕೆರೆಗೆ ಮಿಶ್ರಣ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.
ಕೆರೆ ಒಟ್ಟು 71.18 ಗುಂಟೆ ಇರುವೆ ಕರೆಯಲ್ಲಿ ಯಾವುದೇ ಒತ್ತುವರಿಯಾಗಿಲ್ಲ. ಕೆರೆಯ ಸಂಪೂರ್ಣ ಭಾಗಕ್ಕೆ ಬೇಲಿ ಹಾಕಿ ರಕ್ಷಣೆ ಮಾಡಲಾಗುತ್ತಿದೆ. ಆದರೆ, ಮೂರು ಪ್ರಕರಣದಲ್ಲಿ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಜತೆಗೆ ರಕ್ಷಣೆಗಾಗಿ ಗೃಹ ರಕ್ಷದ ದಳದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಈ ಕೆರೆಯನ್ನು 2016ರಲ್ಲಿ ಬಿಡಿಎ ಬಿಬಿಎಂಪಿಗೆ ಹಸ್ತಾಂತರ ಮಾಡಿದೆ. ಅಲ್ಲದೆ, ಕೆರೆಯಲ್ಲಿ 42 ಎಕೆರೆಯಲ್ಲಿ ಮಾತ್ರ ನೀರು ನಿಲ್ಲಲಾಗುತ್ತಿತ್ತು.
ಬಿಬಿಎಂಪಿ ಅದನ್ನು ಅಭಿವೃದ್ಧಿ ಪಡಿಸಿ ಪುನಶ್ಚೇತನದೊಂದಿಗೆ 44 ಎಕರೆ ವ್ಯಾಪ್ತಿ ವಿಸ್ತರಣೆ ಮಾಡಲಾಗಿದೆ. ಜತೆಗೆ, ಹೂಳು ತೆಗೆದಿರುವುದರಿಂದ ಹೆಚ್ಚಿನ ಪ್ರಮಾಣ ನೀರು ನಿಲ್ಲುತ್ತಿದೆ. 2020 2020ರಲ್ಲಿ 364.2 ಮಿಲಿ ಲೀಟರ್? ಇದ್ದ ನೀರಿನ ಪ್ರಮಾಣ 2022 ರಲ್ಲಿ 628.07 ಮಿಲಿ ಲೀಟರ್?ಗೆ ಹೆಚ್ಚಳವಾಗಿದೆ ಎಂದು ಬಿಬಿಎಂಪಿ ತಿಳಿಸಿತು.
ಇದನ್ನೂಓದಿ:ಭೋಪಾಲ್ ಅನಿಲ ದುರಂತ: ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಕೋರಿದ್ದ ಕೇಂದ್ರದ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್