ಬೆಂಗಳೂರು: ನಗರದ ಮಳಿಗೆಗಳಲ್ಲಿ ಗ್ರಾಹಕರು ಗೌರಿ, ಗಣೇಶನ ಮೂರ್ತಿಗಳನ್ನು ಖರೀದಿಸುತ್ತಿದ್ದಾರೆ. ಗ್ರಾಹಕರಿಗೆ ಅನುಕೂಲವಾಗಲೆಂದು ಸಾಲುಸಾಲಾಗಿ ಮೂರ್ತಿಗಳನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದೆ. ಜನರು ತಮಗಿಷ್ಟವಾದ ಮೂರ್ತಿಗಳನ್ನು ಖರೀದಿ ಮಾಡುವುದರಲ್ಲಿ ಬ್ಯುಸಿಯಾಗಿದ್ದರು. ಅಕ್ಕಿ, ಅರಿಶಿಣ-ಕುಂಕುಮ ತಂದು ಶಾಸ್ತ್ರೋಕ್ತವಾಗಿ ಮೂರ್ತಿಗಳಿಗೆ ಪೂಜೆ ಸಲ್ಲಿಸಿ ಖರೀದಿ ಮಾಡುತ್ತಿದ್ದಾರೆ.
4 ಅಡಿ ಎತ್ತರದ ಮೂರ್ತಿ ಮಾರಾಟ:
ಮಾವಳ್ಳಿಯಲ್ಲಿ 3 ಇಂಚಿನಿಂದ 15 ಅಡಿಯವರೆಗಿನ ಗಣೇಶ ಮೂರ್ತಿಗಳು ಮಾರಾಟಕ್ಕಿವೆ. ಸರ್ಕಾರ 4 ಅಡಿ ಮೂರ್ತಿ ಪೂಜೆಗೆ ಮಾತ್ರ ಅವಕಾಶ ನೀಡಿದ್ದು, ಜನರು ಈ ಗಾತ್ರದ ಮೂರ್ತಿಗಳನ್ನೇ ಖರೀದಿ ಮಾಡುತ್ತಿದ್ದಾರೆ.
ಪರಿಸರಸ್ನೇಹಿ ಮೂರ್ತಿಗೆ ಆದ್ಯತೆ:
ಕೆಲವು ವರ್ಷಗಳಿಂದ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮೂರ್ತಿಗಳನ್ನು ನಿಷೇಧಿಸಿ ಮಣ್ಣಿನ ಗಣೇಶಮೂರ್ತಿ ಖರೀದಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ನಗರದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ.
ಕೋವಿಡ್ ನಿಯಮ ಪಾಲನೆ:
ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಹಿನ್ನೆಲೆಯಲ್ಲಿ ಮಳಿಗಳ ಮಾಲೀಕರು ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಳಿಗೆಗಳ ದ್ವಾರದಲ್ಲಿಯೇ ವ್ಯಾಪಾರಿಗಳು ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿದ್ದಾರೆ. ಮಾಸ್ಕ್ ಹಾಕಿದವರಿಗೆ ಮಾತ್ರ ಮಳಿಗೆಯೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ.
3 ಸಾವಿರ ಪರಿಸರಸ್ನೇಹಿ ಮೂರ್ತಿಗಳ ವಿತರಣೆ:
ನಗರದ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಸುಬ್ರಮಣ್ಯನಗರದ ಈಸ್ಟ್ ವೆಸ್ಟ್ ಸ್ಕೂಲ್ ಬಳಿ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಮತ್ತು ಮಲ್ಲೇಶ್ವರಂ ವಿಧಾನಸಭಾ ಕಾಂಗ್ರೆಸ್ ಸಮಿತಿ ಸಹಯೋಗದಲ್ಲಿ 3 ಸಾವಿರ ಪರಿಸರಸ್ನೇಹಿ ಗಣೇಶ ಮೂರ್ತಿಗಳನ್ನು ಟ್ರಸ್ಟ್ ಅಧ್ಯಕ್ಷರು ಮತ್ತು ಪಕ್ಷದ ಮುಖಂಡ ಪಾದರೇಣು ಮಕ್ಕಳಿಗೆ ವಿತರಿಸಿದರು.
ಈ ವೇಳೆ ಕೆಂಗಲ್ ಹನುಮಂತಯ್ಯ ಟ್ರಸ್ಟ್ ಅಧ್ಯಕ್ಷ ಪಾದರೇಣು ಮಾತನಾಡಿ, ಇಂದಿನ ಮಕ್ಕಳೇ ದೇಶದ ಮುಂದಿನ ಉತ್ತಮ ಪ್ರಜೆಗಳು. ತಂದೆ-ತಾಯಿ ಮತ್ತು ಗುರುಗಳಿಗೆ ಗೌರವ ತರುವ ಹಾಗೆಯೇ ಉತ್ತಮ ನಡತೆ ಬೆಳೆಸಿಕೊಳ್ಳಬೇಕು. ಎಲ್ಲರೂ ಒಂದೇ ಎಂಬ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಗಾಯಿತ್ರಿನಗರ, ಸುಬ್ರಮಣ್ಯನಗರ ಮತ್ತು ಪ್ಯಾಲೇಸ್ ಗುಟ್ಟಹಳ್ಳಿ ,ಅರಮನೆನಗರ, ಅಶ್ವತ್ಥ ನಗರ ಎಸ್ಸಿ/ಎಸ್ಟಿ ಕಾಲೋನಿ ಮಕ್ಕಳಿಗೆ 3 ಸಾವಿರ ಪರಿಸರ ಸ್ನೇಹಿ ಮತ್ತು ನೈಸರ್ಗಿಕ ಬಣ್ಣ ಬಳಸಿದ ಗಣೇಶ ಮೂರ್ತಿಗಳನ್ನು ವಿತರಿಸಲಾಯಿತು ಎಂದರು.
ಇದನ್ನೂ ಓದಿ: ದೊಡ್ಡಗೌಡರ ನಿವಾಸದಲ್ಲಿ ಗೌರಿ ಹಬ್ಬದ ಸಂಭ್ರಮ: ನಾಡಿನ ಜನತೆಗೆ ಶುಭ ಕೋರಿದ ಹೆಚ್ಡಿಡಿ