ಬೆಂಗಳೂರು: ದಿನೇ ದಿನೇ ಉಲ್ಬಣಗೊಳ್ಳುತ್ತಿರುವ ಕೋವಿಡ್ ಸೋಂಕಿಗೆ ಸಿಲಿಕಾನ್ ಸಿಟಿಯ ಜನರು ಕಂಗಾಲಾಗಿದ್ದಾರೆ. ಇನ್ನೊಂದೆಡೆ ಕರ್ಫ್ಯೂ ವಿಸ್ತರಣೆಗೆ ಹೆದರಿ ಜನರು ನಗರ ತೊರೆಯುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ನಗರದಲ್ಲಿ ಯಶಸ್ವಿಯಾಗಿದ್ದರಿಂದ ಕರ್ಫ್ಯೂ ವಿಸ್ತರಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಕರ್ಫ್ಯೂ ಜಾರಿಯಾದರೆ ಜೀವನ ನಡೆಸುವುದು ದುಸ್ತರವಾಗಲಿದೆ. ಅಲ್ಲದೇ ಮಕ್ಕಳಿಗೂ ಸೋಂಕು ಹರಡಲಿದೆ ಎಂಬ ಆತಂಕದಿಂದ ಜನರು ಊರು ಬಿಡುತ್ತಿರುವ ದೃಶ್ಯಾವಳಿ ಎಲ್ಲೆಡೆ ಕಂಡು ಬರುತ್ತಿದೆ.
ತುಮಕೂರು ರಸ್ತೆ, ಹೊಸೂರು, ಹಳೆ ಮದ್ರಾಸ್ ರೋಡ್ಗಳ ಬಸ್ ನಿಲ್ದಾಣಗಳಲ್ಲಿ ಜನರು ಬ್ಯಾಗ್ ಹಿಡಿದು ಪುಟ್ಟ ಪುಟ್ಟ ಮಕ್ಕಳೊಂದಿಗೆ ಬಸ್ಗಾಗಿ ಕಾಯುತ್ತಿದ್ದಾರೆ. ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತ ಜನರು ಬಸ್ ಸಿಗದೆ ಹೈರಾಣಾಗಿದ್ದಾರೆ. 'ಬೆಳಗ್ಗೆಯಿಂದ ಕಾದರೂ ಬಸ್ ಇಲ್ಲ. ನಾವಿದ್ರು ಪರವಾಗಿಲ್ಲ. ಚಿಕ್ಕಮಕ್ಕಳಿದ್ದಾರೆ. ಅವರನ್ನ ಊರಿಗೆ ಬಿಟ್ಟು ಬರುತ್ತೇವೆ. ಮಗು ಮನೆಯಲ್ಲೇ ಇರೋದಿಲ್ಲ, ಹೊರಗಡೆ ಬರುತ್ತೆ. ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಹೆಚ್ಚಾಗುತ್ತಿದೆ' ಎಂದು ಮಹಿಳೆಯೊಬ್ಬರು ಹೇಳಿದರು.
'ನಾನು ವಿಶೇಷ ಚೇತನ. ನನ್ನ ಪತ್ನಿ ಗಾರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದಾಳೆ. ಲಾಕ್ ಡೌನ್ ಆದರೆ ಹೇಗೆ ಜೀವನ ಮಾಡೋದು?. ಪ್ರತಿ ದಿನ ಖರ್ಚಿಗೆ ದುಡ್ಡು ಎಲ್ಲಿಂದ ತರೋದು. ಹಾಗಾಗಿ ಪತ್ನಿಯನ್ನು ಊರಿಗೆ ಕಳಿಸುತ್ತಿದ್ದೇನೆ' ಎಂದು ವ್ಯಕ್ತಿಯೊಬ್ಬರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಿಯಮ ಉಲ್ಲಂಘಿಸಿದ ಮಾಲೀಕರಿಗೆ ದಂಡದ ಬರೆ:
ವೀಕೆಂಡ್ ಕರ್ಫ್ಯೂ ಮುಗಿಯುತ್ತಿದ್ದಂತೆ ಅಗತ್ಯ ಸೇವೆ ನೀಡುವ ಅಂಗಡಿಗಳ ಜೊತೆ ನಿರ್ಬಂಧಿತ ಸೇವೆ ನೀಡುವ ಅಂಗಡಿ-ಮುಂಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟಿನಲ್ಲಿ ಜನರು ತೊಡಗಿದ್ದರು. ಗಾಂಧಿ ಬಜಾರ್, ಬಸವನಗುಡಿ, ಯಲಹಂಕ, ಕೆ.ಆರ್.ಪುರಂ, ಮಲ್ಲೇಶ್ವರಂ ಸೇರಿದಂತೆ ಹಲವು ಕಡೆಗಳಲ್ಲಿ ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರಿಗೆ ಗಸ್ತು ಪೊಲೀಸರು ದಂಡ ವಿಧಿಸಿದರು. ಈ ವೇಳೆ ಕೆಲವೆಡೆ ಮಾಲೀಕರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು.
886 ವಾಹನಗಳು ಜಪ್ತಿ:
ನಗರದಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದರು. ಭಾನುವಾರ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೈಕ್, ಕಾರು ಸೇರಿದಂತೆ 1,265 ವಾಹನಗಳನ್ನು ಜಪ್ತಿ ಮಾಡಿದ್ದ ಪೊಲೀಸರು ಇಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆವರೆಗೂ 25 ನಾಲ್ಕು ಚಕ್ರದ ವಾಹನಗಳು, 20 ತ್ರಿಚಕ್ರ ವಾಹನಗಳು ಹಾಗೂ 841 ದ್ವಿಚಕ್ರ ಸೇರಿದಂತೆ ಒಟ್ಟ 886 ವಾಹನಗಳನ್ನು ಜಪ್ತಿ ಮಾಡಿದರು.
ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್ಡಿಎಂಎ ಕಾಯ್ದೆಯಡಿ 16 ಎಫ್ಐಆರ್ ದಾಖಲಾಗಿವೆ ಎಂದು ಹಿರಿಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 'ಕರ್ಫ್ಯೂಗೆ ಜನ ಸಹಕರಿಸುತ್ತಿದ್ದಾರೆ, ಆದರೂ ಸೋಂಕು ನಿಯಂತ್ರಣಕ್ಕೆ ಬರ್ತಿಲ್ಲ'