ಬೆಂಗಳೂರು: ನಗರದಲ್ಲಿ ಸಂಜೆ ಸುರಿದ ಗುಡುಗು ಸಹಿತ ಭಾರೀ ಗಾಳಿ-ಮಳೆಯಿಂದಾಗಿ ಹಲವೆಡೆ ಸಿಲಿಕಾನ್ ಸಿಟಿ ಜನ ಕತ್ತಲಲ್ಲಿ ದಿನದೂಡುವಂತಾಯಿತು. ಹತ್ತಾರು ಮರಗಳು ಬಿದ್ದು ವಿದ್ಯುತ್ ತಂತಿ ತುಂಡಾಗಿ, ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ.
ಇತ್ತ ಜನರ ಅಹವಾಲು ಸ್ವೀಕರಿಸಬೇಕಾದ ಬೆಸ್ಕಾಂ ಸಹಾಯವಾಣಿಯೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ. ವಿದ್ಯುತ್ ಇಲ್ಲದೆ , ಪಂಪ್ ಮಾಡಲೂ ಸಾಧ್ಯವಾಗದೆ ಕಟ್ಟಡಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಮರ ತೆರವು ಮಾಡುವಲ್ಲಿ ವಿಳಂಬವಾಗುತ್ತಿರುವ ಹಿನ್ನೆಲೆ ವಿದ್ಯುತ್, ನೀರು ಇಲ್ಲದೆ ಜನಜೀವನ ಅಸ್ತವ್ಯಸ್ತವಾಗಿದೆ.
ಪೂರ್ವ ವಿಭಾಗದಲ್ಲಿ 0.51- 31.50 ಮಿ.ಮೀ , ದಕ್ಷಿಣದಲ್ಲಿ 5- 25.50 ಮಿ.ಮೀ, ಆರ್.ಆರ್ ನಗರದಲ್ಲಿ 4.50-67 ಮಿ.ಮೀ, ಯಲಹಂಕದಲ್ಲಿ 33.50- 71. 50 ಮಿ.ಮೀ, ದಾಸರಹಳ್ಳಿಯಲ್ಲಿ 35-53 ಮಿ.ಮೀ, ಮಹದೇವಪುರದಲ್ಲಿ 2-27 ಮಿ.ಮೀ, ಬೊಮ್ಮನಹಳ್ಳಿ 3.50-26.50ಮಿ.ಮೀ, ಪಶ್ಚಿಮ ವಿಭಾಗದಲ್ಲಿ 20.50-55.50 ಮಿ.ಮೀ ನಷ್ಟು ಮಳೆಯಾಗಿದೆ.
ವರುಣಾರ್ಭಟಕ್ಕೆ ವಿಧಾನಸೌಧದ ಸುತ್ತಮುತ್ತ 4, ಮಲ್ಲೇಶ್ವರಂನಲ್ಲಿ 8 ಮರಗಳು ಧರೆಗುರುಳಿವೆ. ಅಲ್ಲದೆ ಹೆಗಡೆನಗರ, ರಾಜಾಜಿನಗರ, ಮಾಗಡಿರಸ್ತೆ, ಚಾಮರಾಜಪೇಟೆ, ಜಯಮಹಲ್, ಸಂಜಯನಗರ, ವಿದ್ಯಾರಣ್ಯಪುರದಲ್ಲೂ ಮರಗಳು ಬಿದ್ದಿವೆ. ಹಲವೆಡೆ ಬುಡಸಮೇತ ಮರಗಳು ಬಿದ್ದಿದ್ದು, ವಾಹನಗಳು ಜಖಂ ಗೊಂಡಿವೆ. ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿರುವ ಘಟನೆ ಸಹ ಜರುಗಿದೆ.