ಬೆಂಗಳೂರು: ಕಾರ್ನಾಡರು ಬರೆದ ಹಯವದನ ನಾಟಕವನ್ನು ಬಿವಿ ಕಾರಂತರು ತುಂಬಾ ಚೆನ್ನಾಗಿ ನಾಟಕ ಮಾಡಿಸಿದ್ದರು. ಟಿಕೆಟ್ ಇಟ್ಟು ಆ ನಾಟಕವನ್ನು ಪ್ರದರ್ಶಿಸಲಾಗಿತ್ತು. ಮೂರು ಮೂರು ಪ್ರದರ್ಶನಗಳು ನಡೆಯುತ್ತಿತ್ತು. ಆದರೂ ಟಿಕೆಟ್ ಸಿಗದೇ ಜನ ಹಳ್ಳಿಗಳಿಗೆ ವಾಪಸಾಗುತ್ತಿದ್ದರು ಎಂದು ಕವಿ ನಿಸಾರ್ ಅಹಮದ್ ಕಾರ್ನಾಡರೊಂದಿಗಿನ ನೆನಪನ್ನು ಹಂಚಿಕೊಂಡರು.
ಗಿರೀಶ್ ಕಾರ್ನಾಡ್ ತುಂಬಾ ಒಳ್ಳೆಯ ವ್ಯಕ್ತಿ ಹಾಗೂ ತಮ್ಮ ನಿಲುವನ್ನು ಯಾರಿಗೂ ಮಾರಿಕೊಳ್ಳಲಿಲ್ಲ. 'ಕಾಡು' ಸಿನಿಮಾ ಮಾಡುವಾಗ ನಾವು ನಿತ್ಯ ಸಿಗುತ್ತಿದ್ದೆವು. ನನ್ನ ಪದ್ಯಗಳಾದ ನಿತ್ಯೋತ್ಸವ, ಕುರಿಗಳು ಸಾರ್ ಕುರಿಗಳು ಇವುಗಳಿಗೆ ತಮಾಷೆ ಮಾಡುತ್ತಿದ್ದರು. ನಮ್ಮನ್ನು ಕುರಿಗಳು ಮಾಡಿಬಿಟ್ರಿ ಎಂದಾಗ ನಾನೂ ಕುರಿಯೇ ಎಂದಿದ್ದೆ.
ಗಿರೀಶ್ ಕಾರ್ನಾಡರು ಕೇವಲ ಒಬ್ಬ ನಾಟಕಕಾರ, ನಿರ್ದೇಶಕ, ಹೋರಾಟಗಾರ, ವಾಗ್ಮಿ ಅಷ್ಟೇ ಅಲ್ಲ ತುಂಬಾ ಒಳ್ಳೆಯ ಅಭಿನಯಕಾರ, ಎಲ್ಲಾ ಭಾಷೆಗಳಲ್ಲಿ ನಟಿಸಿದ್ದರು. ಸಂಸ್ಕಾರ ಸಿನಿಮಾದ ಶೂಟಿಂಗ್ ವೇಳೆ ಇಬ್ಬರು ಹೋಗಿದ್ದೆವು. ಅವರ ಶಿಸ್ತು ಇವತ್ತಿಗೂ ನನ್ನ ಮನಸ್ಸಲ್ಲಿದೆ ಎಂದು ಕಾರ್ನಾಡರನ್ನು ನಿಸಾರ್ ಅಹಮದ್ ನೆನೆದರು.
ಜ್ಞಾನಪೀಠ ಪುರಸ್ಕೃತರಾದರೂ ಸರ್ಕಾರದ ಸವಲತ್ತುಗಳನ್ನು ಯಾವತ್ತೂ ಬಳಸಿಕೊಂಡಿಲ್ಲ. ಯಾವ ವಿಚಾರಕ್ಕೂ ರಾಜೀಯಾಗಲಿಲ್ಲ. ಕೆಲವು ವಿಚಾರಗಳು ಬಹಳ ಕಾಂಟ್ರವರ್ಸಿ ಆಯ್ತು. ಜಗತ್ತು ಒಪ್ಪದಿದ್ದರೂ ಅವರ ನಿಲುವಿಗೆ ಬದ್ಧರಾಗಿದ್ದರು. ಯಾವ ಕಾರ್ಯಕ್ರಮಕ್ಕೂ ಹೋಗ್ತಿರಲಿಲ್ಲ. ನನ್ನ ಪುಸ್ತಕ ಬಿಡುಗಡೆಗೂ ಬಂದಿರಲಿಲ್ಲ ಎಂದು ಕಾರ್ನಾಡರ ವ್ಯಕ್ತಿತ್ವವನ್ನು ಬಣ್ಣಿಸಿದರು.
ಪ್ರಭುತ್ವಗಳ ಅನ್ಯಾಯದ ವಿರುದ್ಧ ಪ್ರತಿರೋಧದ ಧ್ವನಿಯಾಗಿದ್ದ ಕಾರ್ನಾಡ್:
ದೇಶದ ಯಾವುದೇ ಮೂಲೆಯಲ್ಲಿ ದಲಿತರಿಗೆ, ಆದಿವಾಸಿಗಳಿಗೆ ಅನ್ಯಾಯವಾದರೆ, ಶೋಷಣೆಯಾದರೆ ಅದರ ವಿರುದ್ಧ ಧ್ವನಿಯಾಗಿ, ಹೋರಾಡುತ್ತಿದ್ದ ಗಿರೀಶ್ ಕಾರ್ನಾಡರನ್ನು ಕಳೆದುಕೊಂಡಿರುವುದು ದೇಶಕ್ಕೆ ನಷ್ಟವಾಗಿದೆ ಎಂದು ವಕೀಲರು ಹಾಗೂ ಪ್ರಗತಿಪರ ಚಿಂತಕರಾದ ಅನಂತ್ ನಾಯ್ಕ್ ತಿಳಿಸಿದರು. ರಾಜಕೀಯ ಕ್ಷೇತ್ರದಲ್ಲಿ ಸರ್ಕಾರಗಳು ತಪ್ಪು ನಿರ್ಧಾರಗಳನ್ನು ಕೈಗೊಂಡಾಗ ಅಳುಕಿಲ್ಲದೆ, ನೇರಾನೇರವಾಗಿ ಟೀಕಿಸುತ್ತಿದ್ದರು. ನಾನೂ ಗೌರಿ ಹೋರಾಟ, ನಾನೂ ಅರ್ಬನ್ ನಕ್ಸಲ್ ಚಳವಳಿ, ಆಹಾರದ ಹಕ್ಕು, ಸಮಾನತೆಯ ಹಕ್ಕುಗಳ ಹೋರಾಟದಲ್ಲಿ ಸಕ್ರಿಯವಾಗಿ ಗಿರೀಶ್ ಕಾರ್ನಾಡ್ ಭಾಗಿಯಾಗಿದ್ದರು ಎಂದರು.
ಗಿರೀಶ್ ಕಾರ್ನಾಡರಿಗೆ ನಮನ ಸಲ್ಲಿಸಲು ಬಂದಿದ್ದ ಸಿಐಟಿಯು ಮುಖಂಡೆ ವರಲಕ್ಷ್ಮಿ, ಜ್ಞಾನಪೀಠ ಪುರಸ್ಕೃತರಾಗಿದ್ದರೂ ಸಾಮಾನ್ಯರಂತೆ ಬದುಕಿದ್ದವರು ಗಿರೀಶ್ ಕಾರ್ನಾಡರು. ಸೌಹಾರ್ದ ಚಳವಳಿಗಳಲ್ಲಿ, ಸಮಾನತೆಗಳಿಗೆ ಧಕ್ಕೆಯಾದಾಗ, ಪ್ರಭುತ್ವದ ಪ್ರತಿರೋಧ ಹತ್ತಿಕ್ಕುವ ಶಕ್ತಿಗಳ ವಿರುದ್ಧವಾಗಿ ಪ್ರತಿಭಟಿಸುತ್ತಿದ್ದರು ಎಂದರು.