ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿಯಲ್ಲಿ ನಡೆದ ಗಲಭೆ ಸಂಬಂಧ ಬಂಧಿತರ ಕುಟುಂಬಸ್ಥರ ಆಕ್ರೋಶ ಹೆಚ್ಚಾಗಿದೆ. ಇದಕ್ಕೆ ಪೂರಕವೆಂಬಂತೆ ಠಾಣೆ ಬಳಿ ಬಂದು ನಮ್ಮ ಮಕ್ಕಳನ್ನು ತೋರಿಸದಿದ್ದರೆ ಸರ್ವನಾಶ ಆಗ್ತೀರಾ ಎಂದು ಹಿಡಿಶಾಪ ಹಾಕಿದ ಪ್ರಸಂಗ ಜರುಗಿದೆ.
ಗಲಭೆ ಪ್ರಕರಣದಲ್ಲಿ ಸುಮಾರು 400ಕ್ಕೂ ಹೆಚ್ಚು ಆರೋಪಿಗಳ ಬಂಧನವಾಗಿದೆ. ಬಹುತೇಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರೆ ಹಲವು ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಆರೋಪಿಗಳ ಪೋಷಕರು ಹಾಗೂ ಕುಟುಂಬಸ್ಥರು ಠಾಣೆ ಬಳಿ ಬಂದು ನಮ್ಮ ಮಕ್ಕಳನ್ನು ತೋರಿಸಿ ಎಂದು ಗಟ್ಟಿ ಧ್ವನಿಯಿಂದ ಕೇಳಲಾರಂಭಿಸಿದ್ದಾರೆ. ಠಾಣೆಯಲ್ಲಿದ್ದ ಮಹಿಳಾ ಸಿಬ್ಬಂದಿಯನ್ನು ತಳ್ಳಾಡಿ ಆಕ್ರೋಶ ವ್ಯಕ್ತಿಪಡಿಸಿದ ಘಟನೆಯೂ ನಡೆದಿದೆ.
ಇವರನ್ನು ತಡೆದ ಮಹಿಳಾ ಪೊಲೀಸರಿಗೆ ನಮ್ಮ ಮಕ್ಕಳನ್ನು ನಮಗೆ ತೋರಿಸಿದ್ದರೆ ನೀವು (ಪೊಲೀಸರು) ಸರ್ವನಾಶ ಆಗ್ತೀರಾ ಎಂದು ಹಿಡಿಶಾಪ ಹಾಕಿದ್ದಾರೆ. ಸದ್ಯ ಡಿ.ಜೆ.ಹಳ್ಳಿ ಪೊಲೀಸರು 14 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.