ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಕಟ್ಟಡಗಳ ಭಗ್ನಾವವೇಶಗಳನ್ನು ಹಾಕುವುದು, ವಾಹನಗಳ ನಿಲುಗಡೆ, ತಳ್ಳುವ ಗಾಡಿಗಳ ಮೂಲಕ ವ್ಯಾಪಾರ ಮಾಡುವುದನ್ನು ಪಾಲಿಕೆ ನಿಷೇಧಿಸಿ ಈಗಾಗಲೇ ಆದೇಶ ಹೊರಡಿಸಿದೆ. ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರು ಪಾದಚಾರಿಗಳಿಗೆ ಯಾವುದೇ ಅನಾನುಕೂಲ ಮಾಡಿದ್ರೆ ಅಂತಹವರ ವಿರುದ್ಧ ದಂಡ ವಿಧಿಸುವ ಜೊತೆಗೆ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಾಲಿಕೆ ಕಟ್ಟುನಿಟ್ಟಾಗಿ ತಿಳಿಸಿದೆ.
ಫೀಲ್ಡ್ಗಿಳಿದ ಪಾಲಿಕೆ ಅಧಿಕಾರಿಗಳು:
ಈ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಲ್ಸನ್ ಗಾರ್ಡನ್, ಹೊಂಬೇಗೌಡ ನಗರದ (ವಾರ್ಡ್-145) 3ನೇ ಕ್ರಾಸ್ ವ್ಯಾಪ್ತಿಯಲ್ಲಿ ಕಟ್ಟಡದ ಭಗ್ನಾವೇಶಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದರು. ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು. ಸ್ಥಳಕ್ಕೆ ಮಾರ್ಷಲ್ ಮೇಲ್ವಿಚಾರಕ ಹಾಗೂ ಮಾರ್ಷಲ್ಗಳು ಸ್ಥಳೀಯ ಅಭಿಯಂತರರೊಂದಿಗೆ ತೆರಳಿ ಸ್ಥಳದಲ್ಲಿಯೇ 10,000 ರೂ. ದಂಡ ವಿಧಿಸಿದ್ದಾರೆ. ಇನ್ಮುಂದೆ ಈ ರೀತಿ ಸಾರ್ವಜನಿಕರಿಗೆ ತೊಂದರೆ ಮಾಡದಂತೆ ಕಟ್ಟಡ ಮಾಲೀಕರಿಗೆ ತಾಕೀತು ಮಾಡಿದ್ದಾರೆ.
ನಗರದ ಎಲ್ಲಾ ಕಟ್ಟಡದ ಮಾಲೀಕರು, ವ್ಯಾಪಾರಿಗಳು ಸಾರ್ವಜನಿಕರು ಓಡಾಡುವ ಸ್ಥಳಗಳಲ್ಲಿ ಅಡಚಣೆ ಅಥವಾ ತೊಂದರೆ ಉಂಟಾಗದಂತೆ ಅಗತ್ಯ ಕ್ರಮವಹಿಸಿ ನಗರದ ನಾಗರೀಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ.