ಬೆಂಗಳೂರು: ''ಪಿಡಿಒ ವರ್ಗಾವಣೆ ಸಂಬಂಧ ಹೆಚ್.ಡಿ. ರೇವಣ್ಣ ಬಳಿ ಯಾವ ಪೆನ್ ಡ್ರೈವ್ ಇದೆಯೋ ಅದನ್ನು ಕೊಡಲಿ'' ಎಂದು ಸಚಿವ ಪ್ರಿಯಾಂಕ ಖರ್ಗೆ ಸವಾಲು ಹಾಕಿದ್ದಾರೆ. ವಿಕಾಸಸೌಧದಲ್ಲಿ ಗುರುವಾರ ಮಾತನಾಡಿದ ಅವರು, ಸಚಿವರೇ ಡೀಲ್ ಮಾಡ್ತಿದ್ದಾರೆ ಎಂಬ ಆರೋಪದ ವಿಚಾರಕ್ಕೆ ಪ್ರತಿಕ್ರಿಯಿಸಿದರು. ''ರೇವಣ್ಣ ಬಹಳ ಹುಷಾರು ಅನ್ಕೊಂಡಿದ್ದೆ. ಹೌದು, ನೇರವಾಗಿ ಪಿಡಿಒ ವರ್ಗಾವಣೆ ಸರ್ಕಾರದ ಮಟ್ಟದಲ್ಲಿ ಆಗುತ್ತದೆ. ಪಿಡಿಒಗಳು ಈಗ ಸ್ಟೇಟ್ ಕೇಡರ್ನಲ್ಲಿ ಬರುತ್ತಾರೆ. ಮೊದಲು ಸಿಇಒ ಹಾಗೂ ಕಮಿಷನರ್ ಹಂತದಲ್ಲಿ ಪಿಡಿಒ ಆಗುತ್ತಿತ್ತು. ಈ ಕುರಿತು ಡೀಲ್ ಏನಾದ್ರೂ ನಡೆದಿದ್ದರೆ, ದಾಖಲೆ ಇದ್ದರೆ ಕೊಡಿ'' ಎಂದರು.
''ವರ್ಗಾವಣೆ ಮಾಡಬೇಕು, ಕಾನೂನು ಪ್ರಕಾರವೇ ಅದು ಆಗುತ್ತೆ. ಪಿಡಿಒ ಅಸೋಸಿಯೇಷನ್ ಅವರನ್ನು ಕರೆದು ಕೇಳಲಿ. ರೇವಣ್ಣ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡ್ತಾರೆ. ಪ್ರಸ್ತುತ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಹೀಗೆಲ್ಲ ಮಾತನಾಡುತ್ತಾರೆ' ಎಂದು ತಿರುಗೇಟು ನೀಡಿದರು.
ಶಾಸಕರ ಅಸಮಾಧಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಈ ಹಿಂದೆ, ಎರಡು ಬಾರಿ ಶಾಸಕಾಂಗ ಸಭೆ ಮುಂದೂಡಿದ್ದರು. ಬಿ. ಆರ್. ಪಾಟೀಲ್ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಬಿಜೆಪಿ ಬಳಿ ಇರುವುದು ನಕಲಿ ಪತ್ರ. ನಾನು ಪತ್ರ ಬರೆದಿದ್ದು ನಿಜ ಅಂತ ಹೇಳಿದ್ದಾರೆ. ಶಾಸಕಾಂಗ ಸಭೆ ಕರೆಯಬೇಕು ಎಂದು ನಾನು ಕೂಡಾ ಸಿಎಂಗೆ ಕೇಳಿಕೊಂಡಿದ್ದೇನೆ. ಹೀಗಾಗಿ ಬೇಗ ಶಾಸಕಾಂಗ ಪಕ್ಷದ ಸಭೆ ಕರೀರಿ ಅಂತ ಅವರು ಹೇಳಿದ್ದಾರೆ. ಅದರಲ್ಲಿ ಗೊಂದಲ ಏನಿದೆ? ಬಿಜೆಪಿ ಅವರು ನಿರುದ್ಯೋಗಿ ಆಗಿದ್ದಾರೆ. ಕೆಲಸ ಇಲ್ಲದೇ ಮೈ ಪರಚಿಕೊಂಡು ಏನೇನೆಲ್ಲ ಹೇಳ್ತಾರೆ'' ಎಂದು ವಾಗ್ದಾಳಿ ನಡೆಸಿದರು.
''ಸಿಎಂ ಹಾಗೂ ಡಿಸಿಎಂ ಅವರು ಹೇಳಿದ್ದು ಬಜೆಟ್ ಇರುವ ಕಾರಣ ವರ್ಗಾವಣೆ ಆಗಿಲ್ಲ. ಅನುದಾನದ ಬಗ್ಗೆ ಚರ್ಚೆ ಆಗಲಿದೆ. ಹಿಂದಿನ ಸರ್ಕಾರದಲ್ಲಿ ಬಹಳಷ್ಟು ಕೆಲಸ ಮಾಡಬೇಕಾಗಿತ್ತು. ಸಾವಿರಾರು ಕೋಟಿ ಕೆಲಸ ಆಗಬೇಕು. ಈ ಹಿಂದಿನ ಸರ್ಕಾರ ಅವೈಜ್ಞಾನಿಕವಾಗಿ ಅನುದಾನ ಹಂಚಿಕೆ ಮಾಡಿದೆ'' ಎಂದು ಆರೋಪಿಸಿದರು.
ಡಿಕೆಶಿ ಅನುದಾನ ಕೇಳಬೇಡಿ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ, ''ಜನರ ನಿರೀಕ್ಷೆ ಸರ್ಕಾರದಿಂದ ಕೆಲಸ ಆಗುತ್ತೆ ಅಂತ ಇದೆ. ಸರ್ಕಾರ ಬಂದು ಎರಡೇ ತಿಂಗಳಾಗಿದೆ. ನೂತನವಾಗಿ ಬಂದಿರುವ ಶಾಸಕರಿಗೆ ಭಯ ಇರೋದು ನಿಜ. ಅದನ್ನು ಇವತ್ತಿನ ಸಭೆಯಲ್ಲಿ ಬಗೆಹರಿಸುತ್ತೇವೆ. ಅಗತ್ಯ ಇರುವ ಕಾಮಗಾರಿ ಅನುದಾನ ಸಿಗುತ್ತೆ, ಅಲ್ಲಿ ಕೊರತೆ ಆಗಲ್ಲ'' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಗಣಿ ಗುತ್ತಿಗೆ ಸಮಸ್ಯೆ ಪರಿಹರಿಸಲು ಏಕಗವಾಕ್ಷಿ ವ್ಯವಸ್ಥೆ ರೂಪಿಸಲು ಸಿಎಂ ಸೂಚನೆ