ಬೆಂಗಳೂರು: ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಪ್ರಸಕ್ತ ಸಾಲಿನ ಮುಂಗಾರು ಬೆಳೆಯ ವಿಮಾ ಹಣವನ್ನು ಡಿಸೆಂಬರ್ ಅಂತ್ಯದೊಳಗೆ ಪಾವತಿ ಮಾಡಲಾಗುತ್ತದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳೆ ವಿಮೆಯಡಿ ಕಲಬುರಗಿ 313 ರೈತರ ಹಣ ಬಾಕಿ ಇದೆ. ಆಧಾರ್ ಲಿಂಕ್ ಆದ ಕೂಡಲೇ ಬಿಡುಗಡೆ ಮಾಡಲಾಗುತ್ತದೆ. ಈವರೆಗೂ 530 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಬುಧವಾರ ಜಿಲ್ಲಾ ಮಟ್ಟದಲ್ಲಿ ಸಭೆ ಆಗುತ್ತಿದೆ. ವಿಮಾ ಕಂಪನಿಗಳ ಜೊತೆ ನಿರಂತರ ಸಭೆ ಮಾಡುತ್ತಿದ್ದೇವೆ. 2014-15 ರಿಂದಲೂ ಬೆಳೆವಿಮೆ ಬಾಕಿ ಇತ್ತು, ಅದನ್ನು ಕ್ಲಿಯರ್ ಮಾಡಲಾಗುತ್ತಿದೆ ಎಂದರು.
ವಿಮಾ ಹಣ ಕಟ್ಟಿಸಿಕೊಳ್ಳುವಾಗ ಇರುವ ಆಸಕ್ತಿ ವಿಮಾ ಮೊತ್ತ ಕೊಡುವಾಗಲೂ ಇರಬೇಕು. ಪ್ರತಿ ತಾಲೂಕಿನ ರೈತ ಸಂಪರ್ಕ ಕೇಂದ್ರದಲ್ಲಿ ವಿಮಾ ಕಂಪನಿ ವ್ಯಕ್ತಿ ಕೂರಿಸುವ ಕೆಲಸ ಮಾಡಿದ್ದೇವೆ. ಇದನ್ನು ಕಡ್ಡಾಯಗೊಳಿಸಿದ್ದೇವೆ.18,50,000 ರೈತರು ಈ ವರ್ಷ ಬೆಳೆ ವಿಮೆಗೆ ನೋಂದಣಿ ಮಾಡಿದ್ದಾರೆ.
ಈ ವರ್ಷವೇ ಹಣ ಪಾವತಿ: 7 ಲಕ್ಷ ರೈತರು ಕಡೆಯ ವರ್ಷಕ್ಕಿಂತ ಹೆಚ್ಚು ನೋಂದಾಯಿಸಿಕೊಂಡಿದ್ದಾರೆ. ರೈತರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ. ಪ್ರಧಾನ್ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಈ ವರ್ಷದ ಹಣ ಈ ವರ್ಷವೇ ಪಾವತಿ ಮಾಡಲಾಗುತ್ತದೆ. ಇಲ್ಲಿಯವರೆಗೂ ಮುಂದಿನ ವರ್ಷ ಪಾವತಿ ಮಾಡುತ್ತಿದ್ದರು. ಆದರೆ ನಾವು ಈ ಬಾರಿ ಈ ವರ್ಷದ ಡಿಸೆಂಬರ್ ಒಳಗೆ ಮುಂಗಾರು ಹಣ ಬೆಳೆ ವಿಮಾ ಹಣ ನೀಡಲು ತೀರ್ಮಾನಿಸಿದ್ದು, ಅದೇ ರೀತಿ ವಿಮಾ ಕಂಪನಿಗಳಿಗೂ ತಿಳಿಸಲಾಗಿದೆ ಎಂದರು.
ಅಧ್ಯಯನ ವರದಿ ನಂತರ ಪರಿಹಾರ: ರಾಜ್ಯದಲ್ಲಿ ಆಗಿರುವ ಬೆಳೆಹಾನಿ ಪರಿಹಾರವನ್ನು ಈ ಬಾರಿ ಹೆಚ್ಚಿಗೆ ಮಾಡಲಾಗಿದೆ. ಕೇಂದ್ರದಿಂದಲೂ ಅಗತ್ಯ ನೆರವು ಪಡೆಯಲಾಗುತ್ತದೆ. ಅಧ್ಯಯನ ತಂಡದ ವರದಿ ಸಲ್ಲಿಕೆಯಾಗುತ್ತಿದ್ದಂತೆ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ತಿಳಿಸಿದ್ದಾರೆ.
ಜಂಟಿ ಸರ್ವೆ: ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ನ ಅಬ್ದುಲ್ ಜಬ್ಬಾರ್ ಮತ್ತು ಜೆಡಿಎಸ್ನ ಶರವಣ ಜಂಟಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಮಳೆಯಿಂದ 7,61,438 ಹೆಕ್ಟೇರ್ನಲ್ಲಿ ಕೃಷಿ ನಷ್ಟವಾಗಿದೆ. ಮೊದಲು ಕಣ್ಣಳತೆ ಸರ್ವೆ ಮಾಡಿ ನಂತರ ಕಂದಾಯ ಇಲಾಖೆ ಜೊತೆ ಜಂಟಿ ಸರ್ವೆ ಮಾಡಿ ನಷ್ಟದ ಪ್ರಮಾಣ ನೋಂದಾಯಿಸಲಾಗುತ್ತದೆ.
ಕಂದಾಯ ಇಲಾಖೆಯಿಂದ ಬಿಡುಗಡೆ: ಪರಿಹಾರಕ್ಕಾಗಿ 116.39 ಕೋಟಿ ಹಣ ಈ ವರ್ಷ ಕಂದಾಯ ಇಲಾಖೆಯಿಂದ ಬಿಡುಗಡೆಯಾಗಿದೆ. ಹಾನಿ ಪ್ರಮಾಣ ನೋಂದಾಯಿತವಾಗುತ್ತಿದ್ದಂತೆ ಉಳಿದವರಿಗೂ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಮೊದಲು 6,800 ರೂ. ಪ್ರತಿ ಹೆಕ್ಟೇರ್ಗೆ ಇತ್ತು. ಈಗ ನಾವು ಅದನ್ನು 13,600 ಕ್ಕೆ ಹೆಚ್ಚಿಸಿದ್ದೇವೆ. ನೀರಾವರಿಗೆ 13 ಸಾವಿರ ಇತ್ತು ಅದನ್ನು 25 ಸಾವಿರಕ್ಕೆ ಹೆಚ್ಚಿಸಿದ್ದೇವೆ. ತೋಟಗಾರಿಕಾ ಬೆಳೆಗೆ 18 ಸಾವಿರ ಇತ್ತು ಅದನ್ನು 28 ಸಾವಿರಕ್ಕೆ ಹೆಚ್ಚಿಗೆ ಮಾಡಿದ್ದೇವೆ.
ಇದನ್ನು ಕೇಂದ್ರ ಮಾಡಿಲ್ಲ ನಾವೇ ನಮ್ಮ ಬೊಕ್ಕಸದಿಂದ ಈ ಹೆಚ್ಚುವರಿ ಹಣ ಭರ್ತಿ ಮಾಡುತ್ತಿದ್ದೇವೆ ಎಂದರು. ಡಬ್ಬಲ್ ಇಂಜಿನ್ ಸರ್ಕಾರ ಸರಿಯಾಗಿಯೇ ಕೆಲಸ ಮಾಡುತ್ತಿದೆ. ಕೇಂದ್ರ ಅಧ್ಯಯನ ತಂಡ ಬಂದು ಪರಿಶೀಲಿಸಿದೆ. ಮೂರು ದಿನ ಅಧ್ಯಯನ ಮಾಡಿದೆ. ಈ ವರದಿ ಸಲ್ಲಿಕೆಯಾಗುತ್ತಿದ್ದಂತೆ ಕೇಂದ್ರದಿಂದ ನಮಗೆ ಸರಿಯಾದ ಪರಿಹಾರ ಸಿಗಲಿದೆ ಎಂದರು.
13 ಕೋಲ್ಡ್ ಸ್ಟೋರೇಜ್ ನಿರ್ಮಾಣ: ರಾಜ್ಯದಲ್ಲಿ ಹೊಸದಾಗಿ ಕೃಷಿ ಇಲಾಖೆಯಿಂದ 13 ಕೋಲ್ಡ್ ಸ್ಟೋರೇಜ್ ಮಾಡುತ್ತಿದ್ದೇವೆ. ರಾಜ್ಯದ ವಿವಿಧ ಭಾಗದಲ್ಲಿ ಮಾಡಲಾಗುತ್ತಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.
ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಪ್ರಶ್ನೆಗೆ ಉತ್ತರಿಸಿದ ಸಚಿವರು, ಭೂ ಚೇತನ ಯೋಜನೆ 2018 ರಲ್ಲಿ ಮುಕ್ತಾಯವಾಗಿದೆ. ಇದು ಕೇಂದ್ರದ ಯೋಜನೆ, ಕೇಂದ್ರ ಈ ಯೋಜನೆ ನಿಲ್ಲಿಸಿದೆ. ಹಾಗಾಗಿ ಇದನ್ನು ಮರು ಜಾರಿ ಮಾಡಲಾಗಲ್ಲ ಎಂದು ಸದಸ್ಯರ ಬೇಡಿಕೆ ತಳ್ಳಿಹಾಕಿದರು.
ಇದನ್ನೂ ಓದಿ: ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಬದ್ಧ, ಸಿಎಂ ಜೊತೆ ಚರ್ಚಿಸಿ ನಿರ್ಧಾರ: ಶ್ರೀರಾಮುಲು
ಕೋಲಾರ ಜಿಲ್ಲೆ ರೈತರು ಪ್ರಗತಿಪರ ರೈತರು, ಇಸ್ರೇಲ್ ಮಾದರಿ ಮೊದಲನೆಯದ್ದಾದರೆ ಎರಡನೆಯದ್ದೇ ಕೋಲಾರದ್ದು. ಅಲ್ಲಿಗೆ ನಮ್ಮ ರೈತರನ್ನೂ ವೀಕ್ಷಣೆಗೆ ಕಳಿಸಿದ್ದೆ, ಸಮಗ್ರ ಕೃಷಿ ನೀತಿ ಅಳವಡಿಸಿಕೊಂಡಿದ್ದಾರೆ. ಆರ್ಥಿಕ ಲಭ್ಯತೆ ಮೇರೆ ಕೋಲಾರದಲ್ಲಿ ಕೋಲ್ಡ್ ಸ್ಟೋರೇಜ್, ಸಂಸ್ಕರಣ ಘಟಕ ಕೊಡುವ ತೀರ್ಮಾನ ಮಾಡಲಾಗುತ್ತದೆ ಎಂದರು.
ಸದಸ್ಯ ಹರೀಶ್ ಕುಮಾರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2016 ರಲ್ಲಿ ಫಸಲ್ ಭಿಮಾ ಯೋಜನೆ ಜಾರಿಗೆ ಬಂದಿದೆ. 31 ಜಿಲ್ಲೆಗೂ ಮುಂಗಾರು ಬೆಳೆ ವೇಳೆ ವಿಮೆ ಮಾಡಿಸಿಕೊಳ್ಳಬಹುದು. 27 ಜಿಲ್ಲೆಗಳಲ್ಲಿ ಹಿಂಗಾರು, 25 ಜಿಲ್ಲೆಗೆ ಬೇಸಿಗೆಯಲ್ಲಿ ವಿಮೆ ಕೊಡಬಹುದಾಗಿದೆ. ವಿಮಾ ಕಂಪನಿಗೆ ತಾಕೀತು ಮಾಡಿ ಬೆಳೆ ಎಲ್ಲೆಲ್ಲಿ ನಷ್ಟವಾಗಿದೆ ನೋಡಿ ಪಾವತಿ ಮಾಡಬೇಕು ಎಂದು ತಿಳಿಸಿದ್ದು, ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.