ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯ ಭೇಟಿ ಬೆನ್ನಲ್ಲೇ ಪಕ್ಷದ ಕಚೇರಿ ಮತ್ತು ಮುಖ್ಯಮಂತ್ರಿಗಳ ನಿವಾಸದಲ್ಲಿ ಮಹತ್ವದ ಸಭೆಗಳು ನಡೆದಿದ್ದು, ಚುನಾವಣಾ ಪ್ರಚಾರ ಕಾರ್ಯದ ಕುರಿತು ಚರ್ಚಿಸಲಾಗಿದೆ. ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಚುನಾವಣಾ ತಯಾರಿಗಾಗಿ ರಚಿಸಿರುವ ವಿವಿಧ ತಂಡಗಳೊಂದಿಗೆ ಮಾತುಕತೆ ಜರುಗಿದೆ.
ಪ್ರಣಾಳಿಕೆ ಸಲಹಾ ಸಂಗ್ರಹ ತಂಡ, ಫಲಾನುಭವಿಗಳ ಸಮ್ಮೇಳನ ತಂಡ, ವಿಜಯ ಸಂಕಲ್ಪ ರಥಯಾತ್ರೆಗಳ ಉಸ್ತುವಾರಿ ತಂಡ, ವಿಡಿಯೋ ಪ್ರಚಾರ ತಂಡಗಳ ಸಂಚಾಲಕರೊಂದಿಗೆ ಸಮಾಲೋಚನೆ ನಡೆಸಲಾಯಿತು. ಮುಂಬರುವ ದಿನಗಳಲ್ಲಿ ಕೈಗೊಳ್ಳಬೇಕಾದ ರಥಯಾತ್ರೆ, ಫಲಾನುಭವಿಗಳ ಸಮಾವೇಶ, ಪ್ರಚಾರ, ಪ್ರಣಾಳಿಕೆ ರಚನೆ ಹಾಗು ಈವರೆಗೂ ಸಂಚಾಲಕರು ನಡೆಸಿದ ಸಭೆಗಳ ವಿವರ, ಸಂಚಾಲಕರ ತಂಡದಿಂದ ಬಂದ ಅಭಿಪ್ರಾಯ ಕುರಿತು ಅವಲೋಕನವಾಗಿದೆ.
ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ಕಳೆದ ರಾತ್ರಿ ನಡೆದ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಇಂದು ಸಂಚಾಲಕರ ಸಭೆ ನಡೆದಿದೆ. ಸಚಿವರಾದ ಸುಧಾಕರ್, ಹಾಲಪ್ಪಾ ಆಚಾರ್, ಬಿ.ಸಿ.ನಾಗೇಶ್, ಎಸ್.ಟಿ.ಸೋಮಶೇಖರ್, ಸಿ.ಸಿ.ಪಾಟೀಲ್
ಮೋರ್ಚಾ ಸಮಾವೇಶಗಳ ತಂಡದ ಸಹ ಸಂಚಾಲಕರು ಇದ್ದರು. ಬಿಜೆಪಿ ಕಚೇರಿಯಲ್ಲಿ ಸಭೆ ನಡೆದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ ಕೋರ್ಸ್ ರಸ್ತೆಯಲ್ಲಿರುವ ಅಧಿಕೃತ ನಿವಾಸದಲ್ಲಿ ರಾಜ್ಯ ಬಿಜೆಪಿ ಪ್ರಮುಖರ ಸಭೆ ನೆರವೇರಿತು. ಬೊಮ್ಮಾಯಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭಾಗಿಯಾಗಿದ್ದರು. ಚುನಾವಣಾ ತಯಾರಿ, ರೂಪುರೇಷೆ ಅಂತಿಮ ಮಾಡುವ ಕುರಿತು ಚರ್ಚೆ ನಡೆಯಿತು. ಈಗಿನಿಂದಲೇ ಅತಿ ಹೆಚ್ಚು ಸ್ಥಾನ ಗೆಲ್ಲಲು ಪ್ಲಾನ್ ರೂಪಿಸುವಲ್ಲಿ ಮೂವರು ನಾಯಕರು ಸಮಾಲೋಚಸಿದ್ದಾರೆ.
ಇದರ ನಂತರ ಸಿಎಂ ನಿವಾಸದಲ್ಲಿ ಎರಡನೇ ಸಭೆ ನಡೆಯಿತು. ಬಿಜೆಪಿ ರಥಯಾತ್ರೆ, ಪ್ರಚಾರ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವರ ಪ್ರವಾಸ, ಪ್ರಚಾರ ರೂಪುರೇಷೆ ಸಿದ್ಧತಾ ಸಭೆ ನಡೆಯಿತು. ಸಚಿವ ಸಂಪುಟದ ಬಹುತೇಕ ಸಚಿವರು ಭಾಗಿಯಾಗಿದ್ದರು. ಬಿಜೆಪಿ ಕಚೇರಿಯಲ್ಲಿಂದು ಸಂಜೆ ನಡೆದ ಸಭೆಯಲ್ಲಿ ಕೈಗೊಂಡ ತೀರ್ಮಾನಗಳಿಗೆ ಅಂತಿಮ ರೂಪ ನೀಡುವ ಕುರಿತು ಮಾತುಕತೆಯಾಗಿದೆ. ವಿವಿಧ ಮೋರ್ಚಾಗಳ ಸಮಾವೇಶಗಳು, ಸಮಾವೇಶ ಆಯೋಜನೆ, ಭಾಗವಹಿಸುವ ಸಚಿವರಿಗೆ ಜವಾಬ್ದಾರಿ ಹಂಚಿಕೆ, ಪ್ರಚಾರ ಮತ್ತು ಪ್ರವಾಸದ ಜವಾಬ್ದಾರಿ, ಕೆಲಸ ಕಾರ್ಯಗಳ ಹಂಚಿಕೆ ಮಾಡುವ ನಿರ್ಧಾರ ಕೈಗೊಂಡಿದ್ದು, ಬಹುತೇಕ ಇಂದೇ ಜವಾಬ್ದಾರಿ ಹಂಚಿಕೆ ಕಾರ್ಯವನ್ನೂ ಮುಗಿಸಲಾಗುತ್ತದೆ ಎನ್ನಲಾಗಿದೆ.
ಫೆ.27 ರಂದು ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಳಗಾವಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಎರಡೂ ಕಡೆಯ ಕಾರ್ಯಕ್ರಮಗಳ ಸಿದ್ದತೆಗಳ ಕುರಿತು ಚರ್ಚಿಸಲಾಯಿತು.
ಇದನ್ನೂ ಓದಿ: ಪರಿಷತ್ನಲ್ಲಿ ಸದಸ್ಯರ ವಿದಾಯ ಭಾಷಣ: ಅನುಭವ, ಒಡನಾಟದ ಮೆಲುಕು