ಬೆಂಗಳೂರು: ಕೋವಿಡ್ ಕಾರಣದಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ, ಖಾಸಗಿ ಶಾಲೆಗಳು ಮಕ್ಕಳ ಪೋಷಕರಿಗೆ ಶುಲ್ಕ ಪಾವತಿಸುವಂತೆ ಒತ್ತಡ ಹೇರಬಾರದೆಂದು ಸರ್ಕಾರ ಸೂಚಿಸಿದೆ. ಆದರೂ, ಶಾಲೆಗಳು ಶುಲ್ಕ ಪಾವತಿಸುವಂತೆ ಪೀಡಿಸುತ್ತಿವೆ ಎಂದು ಪೋಷಕರು ಆರೋಪಿಸಿದ್ದು, ಶಾಲಾ ಆಡಳಿತ ಮಂಡಳಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಮಲ್ಲತಹಳ್ಳಿಯ ನಾರಾಯಣ ಇ- ಟೆಕ್ನೋ ಸ್ಕೂಲ್ ಮುಂಭಾಗ ಮಕ್ಕಳ ಪೋಷಕರು ಪ್ರತಿಭಟನೆ ನಡೆಸಿದರು. ಆರ್ಥಿಕ ಕಷ್ಟದಲ್ಲಿರುವ ಸಮಯದಲ್ಲಿ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಸುವಂತೆ ಒತ್ತಾಯಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಳೆದ ವರ್ಷಕ್ಕಿಂತ ಈ ವರ್ಷ ನಾರಾಯಣ ಇ-ಟೆಕ್ನೋ ಶಾಲೆಯಲ್ಲಿ ಶೇ. 20 ರಷ್ಟು ಶುಲ್ಕ ಹೆಚ್ಚಳ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಕೋವಿಡ್ ಸಮಯದಲ್ಲಿ ನಾವು ಎಲ್ಲಿಂದ ಹಣ ತರಬೇಕು?. ಶುಲ್ಕ ಕಟ್ಟಿಲ್ಲ ಅಂದ್ರೆ, ಮಕ್ಕಳನ್ನು ಆನ್ಲೈನ್ ಕ್ಲಾಸ್ನಿಂದ ಹೊರಗಿಡುತ್ತಿದ್ದಾರೆ. ಶೈಕ್ಷಣಿಕ ವರ್ಷ ಇನ್ನೂ ಪ್ರಾರಂಭಗೊಂಡಿಲ್ಲ. ಈಗಲೇ ಶುಲ್ಕ ಪಾವತಿಸಿ ಎಂದು ಪೀಡಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
'ಲೋನ್ ಪಡೆದು ಫೀಸ್ ಕಟ್ಟಿ'
ನಾರಾಯಣ ಇ -ಟೆಕ್ನೋ ಶಾಲೆಯವರು ಸಾಲ ನೀಡುವ ಆ್ಯಫ್ ಲಿಂಕ್ ಒಂದನ್ನು ವಿದ್ಯಾರ್ಥಿಗಳ ಪೋಷಕರಿಗೆ ಕಳುಹಿಸಿ ಲೋನ್ ಪಡೆದು ಫೀಸ್ ಕಟ್ಟುವಂತೆ ಸೂಚಿಸಿರುವ ವಿಷಯ ಬೆಳಕಿಗೆ ಬಂದಿದೆ. ನಾರಾಯಣ ಇ- ಟೆಕ್ನೊ ಸ್ಕೂಲ್ ಫೈನಾನ್ಸ್ ಪೀರ್ ಎಂಬ ಫೈನಾನ್ಸ್ ಕಂಪನಿ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ. ಈ ಕಂಪನಿ ವಿದ್ಯಾರ್ಥಿಗಳ ಟಿಸಿ ಆಧಾರದಲ್ಲಿ ಫೀಸ್ ಮಾಹಿತಿನ ಪಡೆದು ಲೋನ್ ಕೊಡುತ್ತದೆ.
ಫೈನಾನ್ಸ್ ಕಂಪನಿ ಲೋನ್ ಹಣವನ್ನು ಪೋಷಕರ ಕೈಗೆ ನೀಡದೆ, ನೇರವಾಗಿ ಶಾಲೆಗೆ ನೀಡುತ್ತದೆ. ಆದರೆ, ಪೋಷಕರು ಲೋನ್ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡಬೇಕು. ಪಡೆದ ಸಾಲಕ್ಕೆ 6 ತಿಂಗಳ ಅವಧಿಗಾದರೆ 0% ಬಡ್ಡಿ , 9 ತಿಂಗಳ ಅವಧಿಗೆ 2% ಬಡ್ಡಿ ಹಾಗೂ 11 ತಿಂಗಳ ಅವಧಿಗೆ 3.5% ನಂತೆ ಬಡ್ಡಿ ಕಟ್ಟಬೇಕು. ಬಡ್ಡಿ ಕಟ್ಟದಿದ್ದರೇ ಮಕ್ಕಳ ಟಿಸಿ ಕೊಡುವುದಿಲ್ಲವೆಂದು ಫೈನಾನ್ಸ್ ಕಂಪನಿಯವರು ಹೇಳಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.