ಬೆಂಗಳೂರು: ಕೊರೊನಾದಿಂದಾಗಿ ಲಾಕ್ಡೌನ್ನಿಂದ ಈ ಸಾಲಿನ 2020 ರ ಶೈಕ್ಷಣಿಕ ವರ್ಷ ಆರಂಭಕ್ಕೆ ಬ್ರೇಕ್ ಹಾಕಲಾಗಿತ್ತು. ಇದೀಗ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುತ್ತಿರುವ ಬೆನ್ನಲ್ಲೇ ಶಾಲೆಗಳ ಪುನರಾಂಭದ ಬಗ್ಗೆ ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ.
ಕೇಂದ್ರ ಗೃಹ ಇಲಾಖೆ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದೆ. ಇದರಲ್ಲಿ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನ ಪುನರಾರಂಭ ಮಾಡುವ ಕುರಿತು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ.
ಇನ್ನು ಸಭೆಯ ತೀರ್ಮಾನದಂತೆ, ರಾಜ್ಯದಲ್ಲಿ ಹಂತ ಹಂತವಾಗಿ ಶಾಲೆಗಳನ್ನು ಪುನರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಪೋಷಕರು ಮತ್ತು ಸಂಬಂಧಿಸಿದ ಪಾಲುದಾರರ ಸಭೆಗಳನ್ನ ಪ್ರತಿ ಶಾಲೆಯ ಮಟ್ಟದಲ್ಲಿ ಆಯೋಜಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಎಲ್ಲ ಶಾಲೆಗಳಿಗೂ ಕೂಡ ಮಾರ್ಗಸೂಚಿ ನೀಡಿದ್ದು, ಶಾಲೆಗಳು ವಿದ್ಯಾರ್ಥಿಗಳ ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ತಿಳಿಸಿದೆ.
ಎಲ್ಲ ಸರ್ಕಾರಿ ಹಾಗೂ ಅನುದಾನಿತ ಮತ್ತು ಅನುದಾನ ರಹಿತ(ಖಾಸಗಿ) ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರು ಕೂಡಲೇ ಜೂನ್ 10 ರಿಂದ 12 ರ ನಡುವಿನ ಅವಧಿಯಲ್ಲಿ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಶಾಲೆಗಳನ್ನು ಪುನರಾರಂಭ ಮಾಡಬಹುದಾದ ದಿನಾಂಕ, ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಧಾನ, ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸೂಚಿಸಲಾಗಿದೆ.