ಬೆಂಗಳೂರು: ರಾಜ್ಯದಲ್ಲಿ ಮಳೆ ಪ್ರಮಾಣ ಕುಸಿದ ಪರಿಣಾಮ ಬೆಂಗಳೂರಿಗರಿಗೆ ನೀರು ಸರಬರಾಜು ಮಾಡುವುದು ಕಷ್ಟ. ಇನ್ನು ಒಂದು ತಿಂಗಳು ಮಾತ್ರ ನೀರು ಕೊಡಬಹುದು. ಮುಂದೆ ಮಳೆ ಬರದಿದ್ದರೆ ನೀರು ಸರಬರಾಜು ಮಾಡುವುದು ಕಷ್ಟ ಎಂದು ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಸಿಲಿಕಾನ್ ಸಿಟಿ ಜನರಿಗೆ ಶಾಕ್ ನೀಡಿದ್ದಾರೆ.
ಬಾಬು ಜಗಜೀವನ್ ರಾಮ್ ಅವರ 33ನೇ ಪುಣ್ಯಸ್ಮರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಆರ್ಎಸ್ ಅಣೆಕಟ್ಟೆಯಲ್ಲಿನ ಇದೀಗ ಒಂದು ತಿಂಗಳಿಗೆ ಆಗುವಷ್ಟು ಮಾತ್ರ ಕುಡಿಯುವ ನೀರಿನ ವ್ಯವಸ್ಥೆ ಇದೆ. ಈ ತಿಂಗಳ ಒಳಗೆ ಮಳೆ ಆಗಬೇಕು. ಆಗದಿದ್ದರೆ ಬೆಂಗಳೂರಿಗರಿಗೆ ಕುಡಿಯುವ ನೀರು ಸರಬರಾಜು ಸ್ಥಗಿತವಾಗಲಿದೆ ಎಂದರು.
ಮಳೆ ಬಿಟ್ಟರೆ ಬೇರೆ ಯಾವುದೇ ಪರಿಹಾರ ಮಾರ್ಗ ನಮ್ಮ ಬಳಿ ಇಲ್ಲ. ಶರಾವತಿ ನದಿಯಿಂದ ನೀರು ತರಲು ಸೂಚಿಸಿದ್ದೇವೆ. ಆದರೆ, ಬೇರೆ ಎಲ್ಲಿಂದಲೋ ನೀರು ಬರಬೇಕೆಂದ್ರೆ ಮಳೆ ಬರಲೇಬೇಕು. ಬಾಗಮಂಡಲ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಇನ್ನು ಹೆಚ್ಚಿನ ಮಳೆ ಆದರೆ ಬೆಂಗಳೂರಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದರು. ಪರಮೇಶ್ವರ್ ಇದಕ್ಕೂ ಮುನ್ನ ಬಾಬು ಜಗಜೀವನ್ ರಾಮ್ ಅವರನ್ನು ನೆನೆದು ಅವರ ಆಡಳಿತಾವಧಿಯನ್ನು ಬಣ್ಣಿಸಿದರು.